ಕರಾವಳಿ ಉತ್ಸವ ಪ್ರಯುಕ್ತ ಕ್ರೀಡೋತ್ಸವ

ಮಂಗಳೂರು, ಡಿ.28: ಕರಾವಳಿ ಉತ್ಸವ ಪ್ರಯುಕ್ತ ಕ್ರೀಡೋತ್ಸವ ಸಮಿತಿಯ ವತಿಯಿಂದ ಶುಕ್ರವಾರ ಕರಾವಳಿ ಉತ್ಸವ ಮೈದಾನದಲ್ಲಿ ಕ್ರೀಡೋತ್ಸವ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಕ್ರೀಡೆಗಳಲ್ಲಿ ಸೋಲು ಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಇಂತಹ ಕ್ರೀಡಾಕೂಟಗಳು, ಉತ್ಸವಗಳು ನಿರಂತರ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.
ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ವಿಶೇಷ ಚೇತನ ಮಕ್ಕಳ ಭಾವನೆಗಳು ಅತ್ಯಂತ ಸಕಾರಾತ್ಮಕವಾಗಿರುವುದನ್ನು ಪ್ರಸ್ತಾಪಿಸಿದ ವೇದವ್ಯಾಸ ಕಾಮತ್ ಉದ್ಘಾಟನೆ ವೇಳೆ ಬಲೂನು ಹಾರಿಬಿಡುವ ಸಂದರ್ಭದಲ್ಲಿ ಜೊತೆಗಿದ್ದ ದಿವ್ಯಾಂಗ ಚೇತನ ಮಗುವನ್ನು ‘ಬಲೂನು ಹಾರಿಬಿಟ್ಟದ್ದು ಯಾರು?’ ಎಂದು ಕೇಳಿದಾಗ ‘ಎಲ್ಲರೂ’ ಎಂಬ ಮಗುನಿಂದ ಬಂದ ಉತ್ತರವು ಅವರ ಭಾವನೆಗಳು ನಮ್ಮೆಲ್ಲರಲ್ಲೂ ಮೂಡಿದರೆ ಚೇತೋಹಾರಿ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿದರು. ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ವಿಶೇಷ ಚೇತನ ಮಕ್ಕಳಿಗಾಗಿ ಆಯೋಜಿಸಿದ ‘ಬಾಚಿ’ ಕ್ರೀಡೆಯಲ್ಲಿ ಮಕ್ಕಳೊಂದಿಗೆ ಪಾಲ್ಗೊಂಡರು.
ಶುಕ್ರವಾರ ನಡೆದ ಕ್ರೀಡಾಕೂಟದಲ್ಲಿ ಹ್ಯಾಂಡ್‌ಬಾಲ್, ಲಗೋರಿ ಕ್ರೀಡಾ ಸ್ಪರ್ಧೆ ನಡೆಯಿತು. ನ್ಯೂಜಿಲ್ಯಾಂಡ್ ಮೂಲದ ಬಾಚಿ ಪಂದ್ಯಾವಳಿ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ವಿಶೇಷಚೇತನ ಮಕ್ಕಳಿಗಾಗಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಜಾವಲಿನ್ ಕ್ರೀಡಾಪಟು ಪುರಂಧರ ಹೆಗಡೆ ಮತ್ತು ಇಲಾಖೆಯಲ್ಲಿ ಸೇವೆಗೈದ ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ಜಯಂತಿ ಆಚಾರ್, ಜಿಪಂ ಉಪಕಾರ್ಯದರ್ಶಿ ಮತ್ತು ಕ್ರೀಡಾ ಸಮಿತಿಯ ಅಧ್ಯಕ್ಷ ಎಂ.ವಿ. ನಾಯಕ್, ಕಾಲೇಜು ಶಿಕ್ಷಣ ಇಲಾಖೆಯ ಡಾ. ಶ್ರೀಧರ ಮಣಿಯಾಣಿ, ದಯಾನಂದ ಮಾಡ, ದೊಡ್ಡಣ, ನಾರಾಯಣ ಎಸ್., ಡಾ. ವಸಂತಕುಮಾರ್ ಶೆಟ್ಟಿ, ಎನ್‌ವೈಕೆ ಜಿಲ್ಲಾ ಸಮನ್ವಯಕಾರರಾದ ರಘುವೀರ್ ಸೂಟರ್‌ಪೇಟೆ ಉಪಸ್ಥಿತರಿದ್ದರು.
ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ ಸ್ವಾಗತಿಸಿದರು.
ಡಿ.29ರಂದು ಬೆಳಗ್ಗೆ 8 ಗಂಟೆಗೆ ಡಾನ್ ಬಾಸ್ಕೊ ಹಾಲ್‌ನಲ್ಲಿ ದ.ಕ.ಜಿಲ್ಲಾ ಮಟ್ಟದ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ವೇಯ್ಟೊ ಲಿಫ್ಟಿಂಗ್ ಪಂದ್ಯಾಟ ಆಯೋಜಿಸಲಾಗಿದೆ.