ಖಾಸಗಿ ಚಾನೆಲ್‌ನ ನಿರೂಪಕನಿಂದ ಪ್ರವಾದಿ ನಿಂದನೆಗೆ ವ್ಯಾಪಕ ಖಂಡನೆ
ಮಂಗಳೂರು, ಡಿ.28: ಖಾಸಗಿ ಚಾನೆಲ್‌ವೊಂದರ ನಿರೂಪಕ ಅಜಿತ್ ಹನುಮಕ್ಕನವರ್ ಇತ್ತೀಚೆಗೆ ವಿಚಾರವಾದಿ ಪ್ರೊಫೆಸರ್ ಭಗವಾನ್ ಹೇಳಿಕೆ ಕುರಿತು ವಿಶ್ಲೇಷಿಸುವಾಗ ಪ್ರವಾದಿ ಮುಹಮ್ಮದ್ (ಸ) ಬಗ್ಗೆ ನಿಂದನಾತ್ಮಕವಾಗಿ ಪ್ರಸ್ತಾಪಿಸಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಮುಸ್ಲಿಂ ಒಕ್ಕೂಟ: ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಹೇಳಿಕೆಯೊಂದನ್ನು ನೀಡಿ ಖಾಸಗಿ ಚಾನೆಲ್‌ನ ನಿರೂಪಕ ಅಜಿತ್ ಸರ್ವರಿಂದಲೂ ಗೌರವಿಸಲ್ಪಡುವ ಪ್ರವಾದಿ ಮುಹಮ್ಮದ್‌ರ ವಿರುದ್ಧ ನಿಂದಿಸಿ ಮಾತನಾಡಿರುವುದು ಖಂಡನೀಯ. ಈ ಬಗ್ಗೆ ಪೊಲೀಸ್ ಇಲಾಖೆಯು ಅಜಿತ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಟಿಪ್ಪು ಸುಲ್ತಾನ್ ಮಹಾವೇದಿಕೆ: ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆಯ ದ.ಕ.ಜಿಲ್ಲಾಧ್ಯಕ್ಷ ಇಸ್ಮಾಯೀಲ್ ಶಾಫಿ ಹೇಳಿಕೆಯೊಂದನ್ನು ನೀಡಿ ಚಾನೆಲ್‌ನ ನಿರೂಪಕ ಅಜಿತ್ ಸುದ್ದಿ ವಿಶ್ಲೇಷಿಸುವ ಭರಾಟೆಯಲ್ಲಿ ಪ್ರವಾದಿ ಮುಹಮ್ಮದ್ (ಸ)ರ ಜೀವನ ಕ್ರಮದ ಅಸಹನೆಯ ಸಿದ್ಧಾಂತ ಭಯೋತ್ಪಾದಕ ಟಿಪ್ಪು ಹುಟ್ಟಿಕೊಳ್ಳಲು ಕಾರಣ ಎಂದು ನಿಂದಿಸಿರುವುದು ಖಂಡನೀಯ. ಒಬ್ಬ ಪತ್ರಕರ್ತನಾಗಿ ಸಮಾಜವನ್ನು ಏಕದೃಷ್ಟಿಯಿಂದ ನೋಡಬೇಕಾಗಿದ್ದ ಅಜಿತ್ ಇಸ್ಲಾಮ್ ಬಗೆಗಿನ ತನ್ನ ಅಸಹನೆಯನ್ನು ಹೊರಹಾಕಲು ಪ್ರವಾದಿ ಮುಹಮ್ಮದ್ ಮತ್ತು ಸ್ವಾತಂತ್ರ ಹೋರಾಟಗಾರ ಟಿಪ್ಪು ಸುಲ್ತಾನ್‌ರನ್ನು ಉಲ್ಲೇಖಿಸಿರುವುದನ್ನು ಸಹಿಸಲು ಅಸಾಧ್ಯ ಎಂದಿದ್ದಾರೆ.
ಮುಸ್ಲಿಂ ವರ್ತಕರ ಸಂಘ: ಅಜಿತ್ ಹನುಮಕ್ಕನವರ್ ಉದ್ದೇಶಪೂರ್ವಕವಾಗಿಯೇ ಪ್ರವಾದಿ ಮುಹಮ್ಮದ್ (ಸ) ಅವರನ್ನು ತೇಜೋವಧೆ ಮಾಡಿದ್ದಾರೆ. ತಾನೊಬ್ಬ ಪತ್ರಕರ್ತ ಎಂಬುದನ್ನೂ ಮರೆತು ಸಂಘ ಪರಿವಾರದ ಏಜೆಂಟ್‌ನಂತೆ ವರ್ತಿಸಿರುವುದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಈತನ ವಿಶ್ಲೇಷಣೆಯಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುವ ಭೀತಿಯಿದೆ. ಹಾಗಾಗಿ ತಕ್ಷಣ ಅಜಿತ್‌ನ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಕ್ರಮ ಜರುಗಿಸಬೇಕು ಎಂದು ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಒತ್ತಾಯಿಸಿದ್ದಾರೆ.
ಮುಸ್ಲಿಂ ಲೀಗ್: ಖಾಸಗಿ ಚಾನೆಲ್‌ನ ನಿರೂಪಕ ಅಜಿತ್‌ನ ನಡೆ ಖಂಡನೀಯ. ವಿಶ್ಲೇಷಿಸುವ ಭರಾಟೆಯನ್ನು ವಿನಾಕಾರಣ ಪ್ರವಾದಿ ಮುಹಮ್ಮದ್ ಅವರನ್ನು ಪ್ರಸ್ತಾಪಿಸಿರುವುದು ಖಂಡನೀಯ. ಶಾಂತಿ ಸಾಮರಸ್ಯವನ್ನು ಹಾಳುಗೆಡಹುತ್ತಿರುವ ಹಾಗೂ ಧರ್ಮಗಳ ಮಧ್ಯೆ ಧ್ವೇಷ ಹರಡುತ್ತಿರುವ ಅಜಿತ್‌ನನ್ನು ಪೊಲೀಸರು ಕೂಡಲೇ ಬಂಧಿಸಬೇಕು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ.ಜಿಲ್ಲಾ ಕಾರ್ಯದರ್ಶಿ ಇಸ್ಮಾಯೀಲ್ ಬಿ.ಸಿ.ರೋಡ್ ಆಗ್ರಹಿಸಿದ್ದಾರೆ.