ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನ: ಪುಸ್ತಕಗಳ ಮುದ್ರಣ, ಬಿಡುಗಡೆಗೆ ಅವಕಾಶ
ಮಂಗಳೂರು, ಡಿ.28: ಜನವರಿ ಕೊನೆಯ ವಾರ ಮಂಗಳೂರು ಪುರಭವನದಲ್ಲಿ ಜರುಗಲಿರುವ ದ.ಕ.ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 23 ನೂತನ ಸಾಹಿತ್ಯ ಕೃತಿಗಳನ್ನು ಸಮ್ಮೇಳನದ ಅಂಗವಾಗಿ ಹೊರತರಲು ನಿರ್ಧರಿಸಲಾಗಿದೆ. ಅದಕ್ಕಾಗಿ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ.
ಕೃತಿಗಳನ್ನು ಕೃತಿಕಾರರೇ ಮುದ್ರಿಸಬೇಕಾಗುತ್ತದೆ. ಕಥೆ, ಕವನ, ಬಾಲ ಸಾಹಿತ್ಯ, ವಿಮರ್ಶೆ, ಕಾದಂಬರಿ, ನಾಟಕ, ಯಕ್ಷಗಾನ, ಪ್ರವಾಸ ಕಥನ ಇವುಗಳಿಗೆ ಸಂಬಂಧಪಟ್ಟಂತೆ ಒಂದು ಪ್ರತಿಯನ್ನು (ಕೈಬರಹ, ಡಿಟಿಪಿ ಪ್ರತಿ) ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಸಮ್ಮೇಳನ ಕಚೇರಿ, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಕೊಡಿಯಾಲ್ ಬೈಲ್, ಮಂಗಳೂರು-3 ಇಲ್ಲಿಗೆ ತಲುಪಿಸಬೇಕು.
ಆಯ್ಕೆಯಾದ ಪುಸ್ತಕದ 100 ಮುದ್ರಿತ ಪ್ರತಿಗಳನ್ನು ಸಮ್ಮೇಳನಕ್ಕೆ ಮುನ್ನ ಪರಿಷತ್ತಿಗೆ ತಂದು ಒಪ್ಪಿಸಬೇಕು. ಕೃತಿಕಾರರು ತಮ್ಮ ಸಂಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿರಬೇಕು. ಆಯ್ಕೆಯಾದ ಮುದ್ರಿತ ಪ್ರತಿಗಳನ್ನು (ಪುಟ ಸಂಖ್ಯೆಗಳನ್ನು) ಅವಲೋಕಿಸಿ ಸೂಕ್ತ ಗೌರವಧನವನ್ನು ಪರಿಷತ್ತಿನ ವತಿಯಿಂದ ನೀಡಲಾಗುವುದು ಎಂದು ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.