ಕಾಂಗ್ರೆಸ್ ಸಚಿವರ ಖಾತೆ ಹಂಚಿಕೆ ಬಗ್ಗೆ ಯಾವುದೇ ಅಸಮಾಧಾನ ಇಲ್ಲ: ಕುಮಾರಸ್ವಾಮಿ

ಬೆಂಗಳೂರು, ಡಿ. 28: ಖಾತೆ ಹಂಚಿಕೆ ಸಂಬಂಧ ನನಗೆ ಯಾವುದೇ ಅಸಮಾಧಾನ ಇಲ್ಲ. ನನ್ನನ್ನು ನೋಡಿದರೆ ಅಸಮಾಧಾನ ಹೊಂದಿರುವಂತೆ ನಾನು ಕಾಣಿಸುತ್ತೇನೆಯೇ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಧ್ಯಮ ಪ್ರತಿನಿಧಿಗಳನ್ನೇ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖಾತೆಗಳ ಹಂಚಿಕೆ ಸಂಬಂಧ ಕಾಂಗ್ರೆಸ್ ನಾಯಕರು ಪಟ್ಟಿಯನ್ನು ಆ ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕಳುಹಿಸಿದ್ದಾರೆ. ಅದನ್ನು ರಾಜ್ಯಪಾಲರಿಗೆ ರವಾನೆ ಮಾಡಿದ್ದೇನೆ ಎಂದು ಹೇಳಿದರು.
ನಾನು ಜವಾಬ್ದಾರನಲ್ಲ: ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಮೈತ್ರಿ ಸರಕಾರ ಒಪ್ಪಂದದ ಪ್ರಕಾರ ನಡೆಯುತ್ತಿಲ್ಲ ಎಂಬ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಚರ್ಚೆ ಮಾಡುತ್ತಾರೆ. ಅದಕ್ಕೆ ನಾನು ಹೊಣೆಗಾರನಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ನಿಗಮ ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಸಂಬಂಧ ಎರಡೂ ಪಕ್ಷಗಳ ಮುಖಂಡರು ಕೂತು ಚರ್ಚೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಮೈತ್ರಿ ಸರಕಾರದಲ್ಲಿ ಎಲ್ಲವೂ ಸುಗಮವಾಗಿ ನಡೆಯಲಿದೆ ಎಂದು ಕುಮಾರಸ್ವಾಮಿ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.







