ದಿಬಾಂಗ್ ಹುಲಿ ಸಂರಕ್ಷಣಾ ಯೋಜನೆಗೆ: ಅರುಣಾಚಲ ಬುಡಕಟ್ಟು ಸಮುದಾಯದ ವಿರೋಧ
ಹೊಸದಿಲ್ಲಿ, ಡಿ.28: ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆಯಲ್ಲಿ ವನ್ಯಜೀವಿ ಅಭಯಾರಣ್ಯವನ್ನು ನಿರ್ಮಿಸುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ)ದ ಪ್ರಸ್ತಾವನೆಗೆ ಅರುಣಾಚಲದ ‘ಇಡು ಮಿಶ್ಮಿ’ ಬುಡಕಟ್ಟು ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಲಿ ಕೂಡಾ ತಮ್ಮ ಬುಡಕಟ್ಟಿಗೇ ಸೇರಿದ್ದು. ಈ ಹಿಂದೆ ಹುಲಿ ಮತ್ತು ಮಿಶ್ಮಿ ಬುಡಕಟ್ಟಿನ ವ್ಯಕ್ತಿಗಳು ಅಣ್ಣ ತಮ್ಮಂದಿರಾಗಿದ್ದರು ಎಂದು ಈ ಬುಡಕಟ್ಟಿನ ಜನತೆ ನಂಬುತ್ತಿದ್ದಾರೆ. ಆದ್ದರಿಂದ ಒಂದು ವೇಳೆ ಹುಲಿ ಈ ಬುಡಕಟ್ಟಿನವರ ಮನೆಗೆ ದಾಳಿ ನಡೆಸಿ ಜಾನುವಾರುಗಳನ್ನು ಹೊತ್ತೊಯ್ದರೂ ಇವರು ಹುಲಿಯನ್ನು ಕೊಲ್ಲಲು ಮುಂದಾಗುವುದಿಲ್ಲ. ಅಣ್ಣನು ಸಹೋದರನ ಮನೆಗೆ ಬಂದು ತನ್ನ ಹಕ್ಕಿನ ಆಹಾರವನ್ನು ಹೊತ್ತೊಯ್ದಿದ್ದಾನೆ ಎಂದೇ ಇವರು ನಂಬುತ್ತಾರೆ. ಆದ್ದರಿಂದ ಈ ಬುಡಕಟ್ಟಿನವರು ವಾಸವಿರುವ ದಿಬಾಂಗ್ ಕಣಿವೆಯಲ್ಲಿ ಈಗ ಹುಲಿಗಳು ಮನುಷ್ಯರಿಂದ ಯಾವುದೇ ಅಪಾಯವಿಲ್ಲದೆ ಸ್ವತಂತ್ರವಾಗಿ ಬದುಕುತ್ತಿವೆ. ಇವುಗಳಿಗೆ ವನ್ಯಜೀವಿ ಅಭಯಾರಣ್ಯದ ಕಟ್ಟುಪಾಡಿನ ಅಗತ್ಯವಿಲ್ಲ ಎಂದು ಇಲ್ಲಿನ ಜನತೆ ಹೇಳುತ್ತಿದ್ದಾರೆ. ಇಲ್ಲಿ ಹುಲಿ ಸಂರಕ್ಷಣಾ ಕೇಂದ್ರ ನಿರ್ಮಿಸಿದರೆ ತಮ್ಮ ಜೀವನಾಧಾರವಾಗಿರುವ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತದೆ ಮತ್ತು ತಮ್ಮ ಕುಟುಂಬದ ಸದಸ್ಯರೇ ಆಗಿರುವ ಹುಲಿಗಳನ್ನು ತಮ್ಮಿಂದ ದೂರ ಇಡಲಾಗುತ್ತದೆ ಎಂದು ಈ ಬುಡಕಟ್ಟಿನ ಜನತೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ದಿಬಾಂಗ್ ಹುಲಿ ಸಂರಕ್ಷಣಾ ಕೇಂದ್ರದ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ತಮ್ಮ ಸಮುದಾಯದ ಜೊತೆಯೂ ಚರ್ಚೆ ನಡೆಸಬೇಕಿತ್ತು ಎಂದು ಈಡು ಮಿಶ್ಮಿ ಬುಡಕಟ್ಟಿನ ಪ್ರಭಾವೀ ಸಂಘಟನೆಯಾಗಿರುವ ‘ಈಡು ಮಿಶ್ಮಿ ಕಲ್ಚರಲ್ ಆ್ಯಂಡ್ ಲಿಟರರಿ ಸೊಸೈಟಿ(ಐಎಂಸಿಎಲ್‌ಸಿ) ಅರುಣಾಚಲ ಪ್ರದೇಶ ಸರಕಾರ, ಕೇಂದ್ರ ಸರಕಾರದ ಪರಿಸರ ಇಲಾಖೆ ಹಾಗೂ ಎನ್‌ಟಿಸಿಎಗೆ ಪತ್ರ ಬರೆದಿದೆ. ಪ್ರಾಯೋಗಿಕ ಸಂಶೋಧನೆ ಮತ್ತು ಈ ಪರಿಸರದಲ್ಲಿರುವ ಹುಲಿಗಳ ಪರಿಸರ ಮತ್ತು ಸಾಮಾಜಿಕ ಅಂಶದ ಕುರಿತು ನಮಗಿರುವ ಹಲವು ವರ್ಷದ ಅನುಭವದ ಆಧಾರದಲ್ಲಿ ಹೇಳುವುದಾದರೆ, ಇಲ್ಲಿ ಬೇಲಿ ಮತ್ತು ಸಶಸ್ತ್ರ ಕಾವಲು ಸಿಬ್ಬಂದಿಯನ್ನು ಹೊಂದಿರುವ ಹುಲಿ ಸಂರಕ್ಷಣಾ ಧಾಮದ ಅಗತ್ಯವೇ ಇಲ್ಲ. ಬದಲಿಗೆ, ಇದುವರೆಗೂ ಹುಲಿಗಳ ಸಂರಕ್ಷಣೆಗೆ ಪೂರಕವಾಗಿಯೇ ಇದ್ದ ಸಾಂಸ್ಕೃತಿಕ ಮಾದರಿಯ ಹುಲಿ ಸಂರಕ್ಷಣಾ ಧಾಮ ನಿರ್ಮಿಸಬೇಕು ಎಂದು ಐಎಂಸಿಎಲ್‌ಸಿ ಆಗ್ರಹಿಸಿದೆ.
ಇಲ್ಲಿ ಹುಲಿ ಸಂರಕ್ಷಣಾ ಕೇಂದ್ರದ ಅಗತ್ಯವೇ ಇಲ್ಲ. ನಾವು ಹುಲಿಗಳನ್ನು ಬೇಟೆಯಾಡುವುದಿಲ್ಲ. ಅವುಗಳ ಸಂರಕ್ಷಣೆಯ ಬಗ್ಗೆ ನಮಗೆ ಯಾರೂ ತಿಳಿಸಬೇಕಿಲ್ಲ. ಯಾಕೆಂದರೆ ಅವು ನಮ್ಮ ಸಹೋದರರಿದ್ದಂತೆ ಎಂದು ಸಮುದಾಯದ ಜನತೆ ಹೇಳುತ್ತಿದ್ದಾರೆ. ರಾಜಸ್ತಾನದ ಸರಿಸ್ಕಾದಲ್ಲಿ ಸ್ಥಳೀಯ ಅರಣ್ಯದಲ್ಲಿ ಹುಲಿಗಳ ಸಂತತಿ ವಿನಾಶದ ಅಂಚಿಗೆ ಸಾಗುತ್ತಿರುವುದು 2004ರಲ್ಲಿ ಬೆಳಕಿಗೆ ಬಂದಾಗ ಎಚ್ಚೆತ್ತುಕೊಂಡ ಎನ್‌ಟಿಸಿಎ ಮತ್ತು ವನ್ಯಜೀವಿ ಅಪರಾಧ ನಿಯಂತ್ರಣ ಮಂಡಳಿ(ಡಬ್ಲೂಸಿಸಿಬಿ), ಹಲವು ಸಂಶೋಧಕರು ಹಾಗೂ ಜೀವಶಾಸ್ತ್ರಜ್ಞರನ್ನು ನೇಮಿಸಿಕೊಂಡು ಅವರಿಗೆ ತರಬೇತಿ ನೀಡಿ ಹುಲಿಗಳ ವಾಸಸ್ಥಳ, ಅಂದಾಜು ಸಂಖ್ಯೆ, ಅವುಗಳ ಬೇಟೆಯ ಸಾಂದ್ರತೆ ಇತ್ಯಾದಿಗಳ ಕುರಿತು ಅಧ್ಯಯನ ನಡೆಸುವ ಕಾರ್ಯಕ್ಕೆ ನಿಯೋಜಿಸಿತು. ಆ ಬಳಿಕ, ರಕ್ಷಿತ ಅರಣ್ಯಪ್ರದೇಶದಲ್ಲಿರುವ ಹುಲಿಗಳ ಗಣತಿಯನ್ನು ನಡೆಸುವುದು ಹಾಗೂ ಹುಲಿಗಳ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳುವ ಪ್ರಕ್ರಿಯೆಗೆ ಆದ್ಯತೆ ನೀಡಲಾಗಿದೆ. ಹುಲಿಗಳನ್ನು ತಮ್ಮ ಸಹೋದರರೆಂದೇ ಪರಿಗಣಿಸುವ ಮಿಶ್ಮಿ ಸಮುದಾಯದವರು ಹುಲಿಗಳ ದೇಹದ ಭಾಗ ತಂದೊಪ್ಪಿಸಿದರೆ ಹೇರಳ ಹಣ ನೀಡುತ್ತೇವೆ ಎಂಬ ಹೊರಗಿನವರ ಆಮಿಷವನ್ನೂ ಮುಲಾಜಿಲ್ಲದೆ ತಿರಸ್ಕರಿಸುತ್ತಾರೆ. ಹುಲಿ ಸಂರಕ್ಷಣೆಯ ವಿಷಯ ಬಂದಾಗ ಎಲ್ಲೆಡೆ ಒಂದೇ ರೀತಿಯ ಯೋಜನೆ ಜಾರಿಗೊಳಿಸುವ ಬಗ್ಗೆ ಮಾತ್ರ ಯೋಚಿಸದೆ ಇದರಾಚೆಗೂ ನೋಡಬೇಕಿದೆ. ಈಶಾನ್ಯ ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಸನ್ನಿವೇಶವನ್ನು ಗಮನಿಸಿ, ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ‘ಇನ್ನರ್‌ಲೈನ್ ಪರ್ಮಿಟ್’ ನೀಡುವುದನ್ನು ದೇಶಕ್ಕೆ ಸ್ವಾತಂತ್ರ ದೊರೆತ ಸಂದರ್ಭ ರೂಪಿಸಲಾಗಿದೆ. ಆದ್ದರಿಂದ ಈ ಪ್ರದೇಶದಲ್ಲಿ ಹುಲಿ ಸಂರಕ್ಷಣೆಯ ಯೋಜನೆ ಜಾರಿಗೊಳಿಸುವ ಸಂದರ್ಭವೂ ಇಲ್ಲಿಯ ವೈವಿಧ್ಯಮಯ ಸಾಂಸ್ಕೃತಿಕ ಸನ್ನಿವೇಶಗಳನ್ನೂ ಗಮನಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.