ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನ
ರಾಜ್ಯದ ಹೆಮ್ಮೆಯ ಪೊಲೀಸ್ ಅಧಿಕಾರಿ
![ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನ](https://www.varthabharati.in/sites/default/files/images/articles/2018/12/28/170152.jpg)
ಹೈದರಾಬಾದ್, ಡಿ. 28: ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ (47) ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಹೈದರಾಬಾದ್ ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪನಿರ್ದೇಶಕರಾಗಿದ್ದ ಮಧುಕರ್ ಶೆಟ್ಟಿ ಇತ್ತೀಚಿಗೆ ತೀವ್ರ ಅಸ್ವಸ್ಥರಾಗಿ ಅಲ್ಲಿನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು.
ಮೊದಲು ಎಚ್ ಒನ್ ಎನ್ ಒನ್ ಕಾಯಿಲೆ ಎಂದು ಹೇಳಲಾಗಿತ್ತಾದರೂ ಬಳಿಕ ಅವರಿಗೆ ಹೃದಯದ ಸೋಂಕಿನ ಸಮಸ್ಯೆ ಎಂದು ತಿಳಿದು ಬಂದಿತ್ತು. ಅವರಿಗೆ ಸಾಧ್ಯವಿರುವ ಎಲ್ಲ ಅತ್ಯುತ್ತಮ ಚಿಕಿತ್ಸೆ ನೀಡಲು ತೆಲಂಗಾಣ ಹಾಗು ಕರ್ನಾಟಕ ಸರಕಾರಗಳು ಪ್ರಯತ್ನಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಖ್ಯಾತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಪುತ್ರ ,1999ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಮಧುಕರ್ ಶೆಟ್ಟಿ, ಕರ್ನಾಟಕದ ಉಡುಪಿ ಜಿಲ್ಲೆಯವರು.
ಅವರು ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಮತ್ತು ನ್ಯೂಯಾರ್ಕ್ ನ ಯೂನಿವರ್ಸಿಟಿಯಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಚಿಕ್ಕಮಗಳೂರು ಎಸ್ಪಿಯಾಗಿ, ಲೋಕಾಯುಕ್ತ ಎಸ್ಪಿಯಾಗಿ ಅವರು ಖಡಕ್ ಹಾಗು ಜನಪರ ಅಧಿಕಾರಿಯಾಗಿ ಖ್ಯಾತಿ ಗಳಿಸಿದ್ದರು.