ಟಿವಿ ನಿರೂಪಕನ ಪ್ರವಾದಿ ನಿಂದನೆ ಖಂಡನಾರ್ಹ, ಸರಕಾರ ಎಚ್ಚೆತ್ತುಕೊಳ್ಳಬೇಕು: ಅನೀಸ್ ಕೌಸರಿ
ಮಂಗಳೂರು, ಡಿ. 28: ಖಾಸಗಿ ಟಿವಿ ಚಾನೆಲ್‌ವೊಂದರ ನಿರೂಪಕ ಅಜಿತ್ ಹನುಮಕ್ಕನವರ್ ಇತ್ತೀಚೆಗೆ ವಿಚಾರವಾದಿ ಪ್ರೊ. ಭಗವಾನ್ ಹೇಳಿಕೆ ಕುರಿತು ವಿಶ್ಲೇಷಿಸುವಾಗ ಪ್ರವಾದಿ ಮುಹಮ್ಮದ್ (ಸ) ಬಗ್ಗೆ ನಿಂದನಾತ್ಮಕವಾಗಿ ಪ್ರಸ್ತಾಪಿಸಿರುವುದು ಖಂಡನಾರ್ಹವಾಗಿದ್ದು, ಈ ಬಗ್ಗೆ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ತಿಳಿಸಿದ್ದಾರೆ.
ಸುವರ್ಣ ಚಾನೆಲ್ ನಿರೂಪಕ ಅಜಿತ್ ಹನುಮಕ್ಕನವರ್ ಪ್ರೊ.ಕೆ.ಎಸ್ ಭಗವಾನ್ ಅವರು ಶ್ರೀರಾಮ ಕುರಿತು ಬರೆದ ಪುಸ್ತಕದ ಕುರಿತು ಚರ್ಚೆ ನಡೆಸುವಾಗ ಪ್ರವಾದಿ ಮುಹಮ್ಮದ್ ಅವರ ವಿಚಾರವನ್ನು ಅನಗತ್ಯವಾಗಿ ಎಳೆದು ತಂದು ಪ್ರವಾದಿಯನ್ನು ನಿಂದನಾತ್ಮಕವಾಗಿ ವಿಮರ್ಶಿಸಿದ್ದು, ಚರ್ಚೆಯಲ್ಲಿ ಮುಸಲ್ಮಾನರನ್ನು ಬಾಂಬ್ ಹಾಕುವವರಾಗಿ ಹೇಳುವ ಮೂಲಕ ರಾಜ್ಯದ ಶಾಂತಿಪ್ರಿಯ ಮುಸ್ಲಿಮರನ್ನು ಭಯೋತ್ಪಾದಕರಾಗಿ ನಿರೂಪಿಸಲಾಗಿದೆ ಎಂದು ಅವರು ಹೇಳಿದ್ದು, ಶ್ರೀ ರಾಮನನ್ನು ಪ್ರೊ. ಕೆ.ಎಸ್. ಭಗವಾನ್ ನಿಂದಿಸಿದ್ದರೆ ಅದನ್ನೂ ಖಂಡಿಸುತ್ತಿದ್ದೇವೆ ಎಂದು ಅನೀಸ್ ಕೌಸರಿ ತಿಳಿಸಿದ್ದಾರೆ.