ನಕಲಿ ದಾಖಲೆ ಸೃಷ್ಟಿಸಿ ಸರಕಾರಿ ಭೂಮಿ ಕಬಳಿಕೆ: ಭೂಗಳ್ಳರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಶಾಸಕ ರಾಮಸ್ವಾಮಿ ಒತ್ತಾಯ

ಬೆಂಗಳೂರು, ಡಿ. 28: ನಕಲಿ ದಾಖಲೆ ಸೃಷ್ಟಿಸಿ ಸರಕಾರಿ ಭೂಮಿ ಕಬಳಿಸುವವರಿಗೆ ಕುಮ್ಮಕ್ಕು ನೀಡುವ ಅಧಿಕಾರಿಗಳು ಮತ್ತು ಭೂ ಕಬಳಿಕೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ಸರಕಾರಿ ಭರವಸೆಗಳ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಮೊದಲ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದ ಸುತ್ತಮುತ್ತಲಿನ ಸುಮಾರು 40 ಸಾವಿರ ಎಕರೆ ಸರಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿದ್ದು, ಆ ಭೂಮಿಗೆ ಭೂಗಳ್ಳರೇ ಒಡೆಯರಾಗಿದ್ದು, ಸರಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.
2 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸರಕಾರಿ ಆಸ್ತಿಯನ್ನು ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ನುಂಗಿ ನೀರು ಕುಡಿದಿದ್ದು, ಈ ಭೂಮಿಯನ್ನು ಸರಕಾರ ವಶಪಡಿಸಿಕೊಳ್ಳಬೇಕು. ಆ ಮೂಲಕ ಭೂಗಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಮಸ್ವಾಮಿ ಮನವಿ ಮಾಡಿದರು.
ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ಬಿ.ಎಂ.ಕಾವಲಿನ ಸರ್ವೆ ನಂ.137ರಲ್ಲಿನ 310 ಎಕರೆ 18 ಗುಂಟೆ ಸರಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದು, ಈ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇಂತಹ ಸಾವಿರಾರು ಪ್ರಕರಣಗಳು ಬೆಂಗಳೂರು ನಗರ ಜಿಲ್ಲೆಯೊಂದರಲ್ಲೆ ನಡೆದಿವೆ ಎಂದು ರಾಮಸ್ವಾಮಿ ಮಾಹಿತಿ ನೀಡಿದರು.
ಸರಕಾರಿ ಭೂಮಿ ಒತ್ತುವರಿಯೇ ಬೇರೆ, ಕಬಳಿಕೆಯೇ ಬೇರೆ. ಕೆಲವರು ತಮ್ಮ ಜೀವನೋಪಾಯಕ್ಕಾಗಿ ಅನಧಿಕೃತವಾಗಿ ಭೂಮಿ ಅನುಭೋಗ ಮಾಡುತ್ತಿರುವುದು ಒತ್ತುವರಿ. ಅಂತಹ ಪ್ರಕರಣಗಳಲ್ಲಿ ಭೂಮಿ ಸಕ್ರಮಗೊಳಿಸಬಹುದು. ಆದರೆ, ವಾಣಿಜ್ಯ ಉದ್ದೇಶಕ್ಕಾಗಿ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿ ಭೂಮಿಹಕ್ಕು ಪಡೆದು ವಂಚಿಸುವವರು ಬಲಾಢ್ಯರು ಎಂದು ಅವರು ಹೇಳಿದರು.
ಇಲ್ಲಿನ ಬಿ.ಎಂ.ಕಾವಲಿನಲ್ಲಿ ಭೂ ಕಬಳಿಕೆ ಮಾಡಿರುವವರು ಅಮಾಯಕರಲ್ಲ, ಬಡವರೂ ಅಲ್ಲ. ಆದರೆ, ನಕಲಿ ದಾಖಲೆಗಳನ್ನು ಆಧರಿಸಿ ವಿಶೇಷ ಜಿಲ್ಲಾಧಿಕಾರಿ ಎಸ್.ರಂಗಪ್ಪ ಯಾವುದೋ ಮರ್ಜಿಗೆ ಒಳಗಾಗಿ ಸರ್ವೆ ನಂ.137ರಲ್ಲಿನ 310 ಎಕರೆ ಭೂಮಿ ಸರಕಾರಿ ಭೂಮಿಯನ್ನು ‘ಹಿಡುವಳಿ’ ಭೂಮಿ ಎಂದು ಆದೇಶ ಮಾಡಿದ್ದಾರೆ.
ಈ ಭೂಮಿ ದಟ್ಟ ಅರಣ್ಯ, ದೊಡ್ಡ ಆಳದ ಕೆರೆಗಳನ್ನು ಹೊಂದಿರುವ ಪ್ರದೇಶ. ಈ ಸಂಬಂಧ ಹಲವು ದಾಖಲೆಗಳಿವೆ. ಅರೆ ನ್ಯಾಯಿಕ ಅಧಿಕಾರದ ಹೆಸರಿನಲ್ಲಿ ಅಧಿಕಾರ ದುರ್ಬಳಕೆಗೆ ಕಾರಣವಾಗಿರುವ ಭೂ ಕಂದಾಯ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಬೇಕು. ತಪ್ಪಿತಸ್ಥ ಅಧಿಕಾರಿ ವಿರುದ್ಧ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. 3 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಬಿ.ಎಂ. ಕಾವಲ್ ಸರಕಾರಿ ಭೂಮಿಯನ್ನು ಕೂಡಲೇ ಸರಕಾರ ವಶಪಡಿಸಿಕೊಳ್ಳಬೇಕು ಎಂದು ಎ.ಟಿ.ರಾಮಸ್ವಾಮಿ ಒತ್ತಾಯಿಸಿದರು.
‘ನಕಲಿ ದಾಖಲೆಗಳನ್ನು ಆಧರಿಸಿ ಸರಕಾರಿ ಭೂಮಿಯನ್ನು ‘ಹಿಡುವಳಿ’ ಎಂದು ಘೋಷಿಸುವ ಇಂತಹ ಅಧಿಕಾರಿಗಳು ಯಾರೋ ಬರೆದ ಆದೇಶಕ್ಕೆ ಸಹಿ ಹಾಕುತ್ತಿದ್ದಾರೆ. ಇಂತಹ ಅಧಿಕಾರಿಗಳಿಂದ ರಾಜ್ಯದ ಹಿತಕ್ಕೆ ಧಕ್ಕೆ. ಯಾವುದೋ ಮರ್ಜಿಗೆ ಒಳಗಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಇಟ್ಟುಕೊಳ್ಳುವುದು ಸರಕಾರಕ್ಕೆ ಶೋಭೆಯಲ್ಲ’
-ಎ.ಟಿ.ರಾಮಸ್ವಾಮಿ
‘ಸಾರ್ವಜನಿಕರ ಸೊತ್ತನ್ನು ಖಾಸಗಿಯವರಿಗೆ ನೀಡಲು ಅಧಿಕಾರಿ ಆತುರ ತೋರುವುದನ್ನು ನೋಡಿದರೆ ಇದರಲ್ಲಿ ದುರುದ್ದೇಶ ಅಡಗಿರುವುದು ಸ್ಪಷ್ಟ. ಅವರೇನು ನನ್ನ ಶತ್ರು ಅಲ್ಲ. ಆದರೆ, ಸರಕಾರಿ ಆಸ್ತಿ ಲೂಟಿಯನ್ನು ಸಹಿಸಲು ಸಾಧ್ಯವಿಲ್ಲ. ಇನ್ನು ಅಧಿಕಾರವಿದ್ದರೂ ಏನು ಪ್ರಯೋಜನ?’
-ಎ.ಟಿ.ರಾಮಸ್ವಾಮಿ







