ಡಿ.ಮಂಜುನಾಥಯ್ಯ ಮಣಿಪಾಲ ಫ್ಲಾಟ್ ಮೇಲೆ ಎಸಿಬಿ ದಾಳಿ: ಭಾರೀ ಮೊತ್ತದ ಬೇನಾಮಿ ಆಸ್ತಿ, ಸೊತ್ತುಗಳು ಪತ್ತೆ

ಉಡುಪಿ, ಡಿ.28: ಅಕ್ರಮ ಸಂಪತ್ತು ಹೊಂದಿದ್ದ ರಾಜ್ಯ ಸರಕಾರಿ ಅಧಿಕಾರಿಗಳ ಮನೆಗಳ ಮೇಲೆ ಇಂದು ಮುಂಜಾನೆ ಎಸಿಬಿ ತಂಡ ರಾಜ್ಯದ 17 ಕಡೆಗಳಲ್ಲಿ ದಾಳಿ ನಡೆಸಿದ್ದು, ಇದರಲ್ಲಿ ಉಡುಪಿ ನಗರಸಭೆಯ ಹಿಂದಿನ ಪೌರಾಯುಕ್ತರಾಗಿದ್ದ, ಈಗ ಮಂಗಳೂರಿನಲ್ಲಿ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ರೀಡರ್ ಆಗಿರುವ ಡಿ.ಮಂಜುನಾಥಯ್ಯ ಅವರ ಮಣಿಪಾಲದಲ್ಲಿರುವ ಫ್ಲಾಟ್ ಸಹ ಸೇರಿದೆ.
ಶುಕ್ರವಾರ ಬೆಳ್ಳಂಬೆಳಿಗ್ಗೆ ಮಣಿಪಾಲದಲ್ಲಿರುವ ಮಂಜುನಾಥಯ್ಯರ ಫ್ಲಾಟ್ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದರು. ದಾಳಿಯ ವೇಳೆ ಅನೇಕ ಬೇನಾಮಿ ಆಸ್ತಿಯ ವಿವರಗಳು ಪತ್ತೆಯಾಗಿವೆ. ಸದ್ಯ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥಯ್ಯ, ಅದಕ್ಕೆ ಮೊದಲು ದಶಕಗಳ ಕಾಲ ಉಡುಪಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು.
ಮಂಜುನಾಥಯ್ಯ ವಿರುದ್ಧ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ಎಸಿಬಿ ಎಸ್ಪಿ ಶೃತಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದಾಳಿಯಲ್ಲಿ ದಾಖಲೆಗಳ ಪರಿಶೀಲನೆ ವೇಳೆ ಶಿವಮೊಗ್ಗದಲ್ಲಿ ಎರಡು ನಿವೇಶನ, ಒಂದು ಮನೆ, ಮಣಿಪಾಲದಲ್ಲಿ ಎರಡು ಫ್ಲಾಟ್, 443 ಗ್ರಾಂ ಚಿನ್ನ, ಒಂದು ಕೆ.ಜಿ ಬೆಳ್ಳಿ, ಎರಡು ಕಾರು, ಎರಡು ಬೈಕ್, ಮೂರು ಐಫೋನ್, ಒಂದುವರೆ ಲಕ್ಷ ರೂ. ನಗದು, 10.50 ಲಕ್ಷ ರೂ. ಬ್ಯಾಂಕ್ ಠೇವಣಿ ಬಾಂಡ್ ಪತ್ತೆಯಾಗಿದೆ.
ಇನ್ನೂ ಹಲವು ಬೇನಾಮಿ ಆಸ್ತಿಗಳ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಎಸಿಬಿ ಪಶ್ಚಿಮ ವಲಯ ಎಸ್ಪಿ ಶೃತಿ ನೇತೃತ್ವದಲ್ಲಿ ಬೆಳಗಿನಿಂದಲೇ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ. ಸಂಜೆಯವರೆಗೂ ಮಂಜುನಾಥಯ್ಯರ ಮಣಿಪಾಲ ಫ್ಲಾಟ್‌ನಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿತ್ತು. ಅಲ್ಲದೇ ಶಿವಮೊಗ್ಗದ ಚೆನ್ನಗಿರಿ ಹಾಗೂ ಚಿಕ್ಕಮಗಳೂರಿನ ಕಡೂರು, ಬೀರೂರಿನಲ್ಲಿರುವ ಅವರ ಸಂಬಂಧಿಕರ ಮನೆಗಳು ಹಾಗೂ ಮಂಗಳೂರಿನ ಕಚೇರಿಯ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗುತಿ್ತದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಬೆಳಗ್ಗೆ 6 ಗಂಟೆ ಸುಮಾರಿಗೆ ಎಸಿಬಿ ಎಸ್ಪಿ ಶೃತಿ ನೇತೃತ್ವದ 15 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಮಣಿಪಾಲ ಪ್ರಿಯದರ್ಶಿನಿ ಎನ್‌ಕ್ಲೈವ್ ಫ್ಲಾಟ್‌ನ 302 ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಫ್ಲಾಟ್‌ಗಳ ಎಲ್ಲಾ ಕೋಣೆ, ಕಪಾಟುಗಳನ್ನು ಅಧಿಕಾರಿಗಳು ಜಾಲಾಡಿದ್ದಾರೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ನಗದು ಮತ್ತು ಚಿನ್ನ, ಬೆಳ್ಳಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಮಣಿಪಾಲದಲ್ಲಿ 2 ಫ್ಲಾಟು, ಹಣಕಾಸು ವ್ಯವಹಾರ ಮತ್ತು ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖೆಗಳನ್ನು ವಶಪಡಿಸಿಕೊಂಡಿದ್ದರು.
ಎಸಿಬಿ ಎಸ್ಪಿ ಶೃತಿ, ಉಡುಪಿ ಡಿವೈಎಸ್‌ಪಿ ದಿನಕರ ಶೆಟ್ಟಿ, ಕಾರವಾರ ಡಿವೈಎಸ್‌ಪಿ ಗಿರೀಶ್, ಚಿಕ್ಕಮಗಳೂರು ಡಿವೈಎಸ್‌ಪಿ ನಾಗೇಶ್ ಶೆಟ್ಟಿ, ಉಡುಪಿ ಎಸಿಬಿ ನಿರೀಕ್ಷಕರಾದ ಸತೀಶ್, ಯೊಗೀಶ್, ಜಯರಾಮ್ ಗೌಡ, ರಮೇಶ್ ಮತ್ತು ಸಿಬ್ಬಂದಿಗಳ ತಂಡ ದಾಳಿಯಲ್ಲಿ ಭಾಗವಹಿಸಿದೆ.
ಮೂಲತ: ಶಿಕ್ಷಣ ಇಲಾಖೆಯಲ್ಲಿದ್ದ ಮಂಜುನಾಥಯ್ಯ, ಉಡುಪಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕೆಲಕಾಲ ಸೇವೆ ಸಲ್ಲಿಸಿದ ಬಳಿಕ, ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ, ನಗರ ಪ್ರಾಧಿಕಾರದ ಆಯುಕ್ತ, ನಗರಸಭೆಯ ಪೌರಾಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ಅವರ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಪೌರಾಯುಕ್ತರಾಗಿದ್ದ ವೇಳೆ ‘ಮಂಜುನಾಥಯ್ಯ ಹಟಾವೊ ಉಡುಪಿ ಬಚಾವೊ’ ಹೋರಾಟವನ್ನು ಬಿಜೆಪಿ ನಡೆಸಿತ್ತು. ನೂತನ ಸರಕಾರ ಅಧಿಕಾರಕ್ಕೆ ಬಂದ ನಂತರ ಅವರನ್ನು ಮಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು.