ಉಡುಪಿ: ರೈಲಿನಲ್ಲಿ ಪತ್ತೆಯಾದ ಬಾಲಕ ಹೆತ್ತವರ ಮಡಿಲಿಗೆ

ಉಡುಪಿ, ಡಿ.28: ಶುಕ್ರವಾರ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ 17 ವರ್ಷ ಪ್ರಾಯದ ಬಾಲಕನೊಬ್ಬ ಸಂಶಯಾಸ್ಪದ ರೀತಿಯಲ್ಲಿ ಕಂಡು ಬಂದಿದ್ದು, ಉಡುಪಿ ಆರ್‌ಪಿಎಫ್‌ನ ಇನ್‌ಸ್ಪೆಕ್ಟರ್ ಸಂತೋಷ್ ಗಾಂವಕರ್ ಹಾಗೂ ಕಾನ್‌ಸ್ಟೇಬಲ್ ವೇಣು ಸಿ.ಎಚ್. ಆತನನ್ನು ವಶಕ್ಕೆ ಪಡೆದು ಆತನ ವಿಳಾಸದ ಮೂಲಕ ಹೆತ್ತವರ ಮಡಿಲಿಗೆ ಮತ್ತೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆತ ಟಿಕೇಟ್ ಇಲ್ಲದೇ ಪ್ರಯಾಣಿಸುತಿದ್ದು, ಆತನನ್ನು ಹಿಡಿದು ವಿಚಾರಿಸಿದಾಗ ಯಾವುದೇ ತೃಪ್ತಿಕರ ಉತ್ತರ ನೀಡಲಿಲ್ಲ. ಆತನನ್ನು ಆರ್‌ಪಿಎಫ್ ಕಚೇರಿಗೆ ಕರೆತಂದು ಆತನ ಬ್ಯಾಗ್‌ನ್ನು ಪರಿಶೀಲಿಸಿದಾಗ ಅದರಲ್ಲಿ ಆತನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ದಾಖಲೆಪತ್ರಗಲು, ಆಧಾರ ಕಾರ್ಡ್ ಹಾಗೂ ಬೆಂಗಳೂರು ಕಮಲನಗರದ ಒಂದು ಮೊಬೈಲ್ ನಂ. ಪತ್ತೆಯಾಯಿತು.
ಆಧಾರ ಕಾರ್ಡ್‌ನಲ್ಲಿ ಆತ ಕಮಲನಗರದ ಲಿಂಗೇಗೌಡರ ಪುತ್ರ ಶಿವಕುಮಾರ್ ಎಂಬುದು ತಿಳಿದುಬಂತು. ಮೊಬೈಲ್‌ನ್ನು ಸಂಪರ್ಕಿಸಿದಾಗ ಆತನ ತಂದೆ ಲಿಂಗೇಗೌಡರೇ ಮಾತನಾಡಿ ತನ್ನ ಮಗ ಡಿ.15ರಂದು ಬೆಂಗಳೂರಿನಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದರು.
ಸುದ್ದಿ ತಿಳಿದ ತಕ್ಷಣ ಅವರು ಇಂದು ಸಂಜೆ 6ಗಂಟೆ ಸುಮಾರಿಗೆ ಕುಟುಂಬದೊಂದಿಗೆ ಉಡುಪಿಗೆ ಧಾವಿಸಿ ಬಂದು ಮಗನನ್ನು ಕಂಡು ಮಾತನಾಡಿದರು. ವಿಚಾರಣೆಯ ವೇಳೆ ಶಿವಕುಮಾರ್ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಯಾವುದೋ ಕಾರಣಕ್ಕೆ ತಂದೆ ಹೊಡೆದಿದ್ದಕ್ಕಾಗಿ ಮನೆಯಿಂದ ಓಡಿ ಬಂದಿರುವುದಾಗಿ ತಿಳಿಯಿತು. ಪೊಲೀಸರ ಸೂಚನೆಯಂತೆ ಕೊನೆಯ ಶಿವಕುಮಾರ್ ಅವರನ್ನು ತಂದೆ ವಶಕ್ಕೆ ಒಪ್ಪಿಸಲಾಯಿತು.