ಒಡಿಶಾ: ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಧಾವಿಸಿದ ರಾಜ್ಯದ ಅಗ್ನಿಶಾಮಕ ದಳದ ತಂಡ
ಭುವನೇಶ್ವರ, ಡಿ. 28: ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯ ಕಸನ್ ಗ್ರಾಮದಲ್ಲಿ ನೆರೆ ನೀರಿನಿಂದ ತುಂಬಿದ ಕಾನೂನು ಬಾಹಿರ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿಕೊಂಡಿರುವ 15 ಮಂದಿ ಕಾರ್ಮಿಕರನ್ನು ರಕ್ಷಿಸುವ ನೂತನ ಪ್ರಯತ್ನವಾಗಿ ಸ್ಥಳೀಯ ಆಡಳಿತಕ್ಕೆ ನೆರವು ನೀಡಲು ಅತ್ಯಧಿಕ ಶಕ್ತಿಯ ನೀರು ಖಾಲಿ ಮಾಡುವ ಪಂಪ್‌ನೊಂದಿಗೆ ಅಗ್ನಿಶಾಮಕ ದಳದ 21 ಸದಸ್ಯರ ತಂಡ ಐಎಎಫ್ ವಿಮಾನದ ಮೂಲಕ ಮೇಘಾಲಯಕ್ಕೆ ತೆರಳಿದೆ.
ಅವಘಡ ಸಂಭವಿಸಿದ ಸ್ಥಳಕ್ಕೆ ತಲುಪುವ ಮುನ್ನ ತಂಡ ಸರಿ ಸುಮಾರು 200 ಕಿ.ಮೀ. ರಸ್ತೆ ಹಾದಿ ಕ್ರಮಿಸಿದೆ. ಗಣಿಯಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವ ಭರವಸೆ ಮಸುಕಾದಾಗ ಕೇಂದ್ರ ಗೃಹ ಖಾತೆಯ ಸಚಿವಾಲಯ ಗುರುವಾರ ಅನುಭವಿ ತಂಡವನ್ನು ಕಳುಹಿಸಿಕೊಡುವಂತೆ ಒಡಿಶಾ ಅಗ್ನಿ ಶಾಮಕ ದಳದಲ್ಲಿ ಮನವಿ ಮಾಡಿದರು.
20 ನೀರೆಳೆದು ಹೊರ ಹಾಕುವ ಶಕ್ತಿ ಶಾಲಿ ಪಂಪ್‌ಗಳೊಂದಿಗೆ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಸುಕಾಂತ ಸೇಥಿ ನೇತೃತ್ವದ ತಂಡ ಶುಕ್ರವಾರ ಬೆಳಗ್ಗೆ ಐಎಎಫ್‌ನ ವಿಶೇಷ ವಿಮಾನದಲ್ಲಿ ಘಟನಾ ಸ್ಥಳಕ್ಕೆ ತೆರಳಿದೆ ಎಂದು ಅಗ್ನಿಶಾಮಕ ದಳದ ಪ್ರಧಾನ ನಿರ್ದೇಶಕ, ಗೃಹ ರಕ್ಷಕ ದಳದ ಕಮಾಂಡೆಂಟ್ ಜನರಲ್ ಹಾಗೂ ನಾಗರಿಕ ರಕ್ಷಣೆಯ ನಿರ್ದೇಶಕ ಬಿ.ಕೆ. ಶರ್ಮಾ ಅವರು ಹೇಳಿದ್ದಾರೆ.
ಪ್ರತಿ ಪಂಪ್ ಪ್ರತಿ ನಿಮಿಷಕ್ಕೆ 1,600 ಲೀಟರ್ ನೀರು ಎಳೆದು ಹೊರ ಹಾಕುವ ಸಾಮರ್ಥ್ಯ ಹೊಂದಿದೆ. ಕಾರ್ಮಿಕರನ್ನು ರಕ್ಷಿಸುವ ಭರವಸೆ ನಮಗಿದೆ. ಇಂತಹ ವಿಕೋಪ ನಿರ್ವಹಿಸಿದ ಅನುಭವ ನಮಗಿದೆ. ನಾವು ತುಂಬಾ ಮೊದಲೇ ಹೋಗಬೇಕಿತ್ತು. ಆದರೆ, ಗೃಹ ಖಾತೆಯ ಸಚಿವಾಲಯದಿಂದ ಮನವಿ ಗುರುವಾರ ಬಂತು ಎಂದು ಶರ್ಮಾ ಹೇಳಿದ್ದಾರೆ.