ಪ್ರಸಕ್ತ ವರ್ಷದ ವಿದ್ಯಾರ್ಥಿಗಳಿಗೆ ಸಿಗದ 'ಸೈಕಲ್ ಭಾಗ್ಯ': ಬನ್ನಡ್ಕ ಶಾಲೆಯಲ್ಲೇ ಉಳಿದುಕೊಂಡ ಬೈಸಿಕಲ್‍ಗಳು

ಮೂಡುಬಿದಿರೆ, ಡಿ. 28 : ಕಳೆದ 10 ವರ್ಷಗಳಿಂದ ಸರಕಾರವು ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್‍ಗಳನ್ನು ನೀಡುತ್ತಾ ಬರುತ್ತಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಮೂಡುಬಿದಿರೆ ವಲಯದ ವಿದ್ಯಾರ್ಥಿಗಳಿಗೆ ವಿತರಿಸಬೇಕಾದ ಸೈಕಲ್‍ಗಳು ಸುಮಾರು ಮೂರು ತಿಂಗಳುಗಳಿಂದ ಬನ್ನಡ್ಕದ ಪಾಡ್ಯಾರು ಸರಕಾರಿ ಪ್ರಾಥಮಿಕ ಶಾಲೆಯಲ್ಲೆ ಉಳಿದುಕೊಳ್ಳುವ ಮೂಲಕ ವಿದ್ಯಾರ್ಥಿಗಳು "ಸೈಕಲ್ ಭಾಗ್ಯ"ದಿಂದ ವಂಚಿತರಾಗುವಂತೆ ಮಾಡಿದೆ.
ಸರಕಾರವು ಹೀರೊ ಕಂಪೆನಿಯ 898 ಸೈಕಲ್‍ಗಳನ್ನು ಮೂಡುಬಿದಿರೆ ವಲಯದ ಒಂಬತ್ತು ಸರಕಾರಿ ಪ್ರೌಢಶಾಲೆ, ಒಂಬತ್ತು ಅನುದಾನಿತ ಪ್ರೌಢಶಾಲೆ ಮತ್ತು 5 ಉನ್ನತೀಕರಿಸಿದ ಶಾಲೆಗಳ ವಿದ್ಯಾರ್ಥಿಗಳಿಗೆ ಈ ವರ್ಷ ಮಂಜೂರು ಮಾಡಿತ್ತು. ಅದರಂತೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಬನ್ನಡ್ಕ ಶಾಲಾ ಮೈದಾನಕ್ಕೆ ಸೈಕಲ್‍ಗಳ ಬಿಡಿಭಾಗಗಳನ್ನು ತಂದು ಹಾಕಿಸಿ ಅದನ್ನು ಜೋಡಿಸುವ ಕಾರ್ಯಕ್ಕೆ ಸುಮಾರು 6 ಮಂದಿ ಕಾರ್ಮಿಕರನ್ನು ನೇಮಿಸಿ ಕೆಲಸ ಮಾಡಿಸಿತ್ತು. ಜೋಡಿಸುವ ಕೆಲಸ ಪೂರ್ಣಗೊಂಡು ಸುಮಾರು ಎರಡು ತಿಂಗಳು ಕಳೆದರೂ ಸೈಕಲ್‍ಗಳು ಮಾತ್ರ ವಿದ್ಯಾರ್ಥಿಗಳಿಗೆ ವಿತರಣೆಯಾಗದೆ ಇನ್ನೂ ಅದೇ ಸ್ಥಳದಲ್ಲಿವೆ.
ಗುಣಮಟ್ಟವಿಲ್ಲದ ಕಾರಣಕ್ಕೆ ತಡೆ: ರಾಜ್ಯದ ಕೆಲವೆಡೆ ಈ ವರ್ಷ ವಿತರಿಸಿದ ಸೈಕಲ್‍ಗಳು ದೋಷಪೂರಿತವಾಗಿದ್ದ ಬಗ್ಗೆ ಇಲಾಖೆಗೆ ದೂರುಗಳು ಹೋದ ಹಿನ್ನೆಲೆಯಲ್ಲಿ ಗುಣಮಟ್ಟ ಪರಿಶೀಲಿಸಿದ ಬಳಿಕವೆ ಸೈಕಲ್‍ಗಳನ್ನು ವಿತರಿಸಬೇಕೆಂದು ಸರಕಾರ ಎಲ್ಲಾ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಆದೇಶ ನೀಡಿದ್ದರಿಂದ ಮೂಡುಬಿದಿರೆಯಲ್ಲು ಸೈಕಲ್‍ಗಳ ವಿತರಣೆಯನ್ನು ತಡೆಹಿಡಿಯಲಾಗಿದೆ ಎನ್ನಲಾಗಿದೆ.
ಗುಣಮಟ್ಟ ಪರಿಶೀಲಿಸಿದ ಅಧಿಕಾರಿಗಳು : ಸರಕಾರದ ಆದೇಶದಂತೆ ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಅಶಾ ನೇತ್ರತ್ವದ ತಂಡವು ಈಚೆಗೆ ಬನ್ನಡ್ಕಕ್ಕೆ ತೆರಳಿ ಸೈಕಲ್‍ಗಳ ಗುಣಮಟ್ಟ ಪರಿಶೀಲಿಸಿತು. ಕೆಲವು ಸೈಕಲ್‍ಗಳಲ್ಲಿ ದೋಷ ಇರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ ಎನ್ನಲಾಗಿದೆ. ದೋಷ ಇರುವ ಸೈಕಲ್‍ಗಳು ಮರುದುರಸ್ತಿಯಾದ ಬಳಿಕ ಮುಂದಿನ ಜನವರಿಯಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಗೆ ಸರಕಾರ ಆದೇಶಿಸಬಹುದೆನ್ನಲಾಗಿದೆ.
ಗುಣಮಟ್ಟದ ಕೊರತೆಯ ಹಿನ್ನೆಲೆಯಲ್ಲಿ ಸೈಕಲ್‍ಗಳ ವಿತರಣೆಯನ್ನು ತಡೆಹಿಡಿಯಲಾಗಿದೆ. ಸರಕಾರದ ಆದೇಶದಂತೆ ಸೈಕಲ್‍ಗಳ ಗುಣಮಟ್ಟವನ್ನು ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇನೆ. ಶೀಘ್ರದಲ್ಲೆ ಸೈಕಲ್‍ಗಳ ವಿತರಣೆಗೆ ಸರಕಾರ ಆದೇಶಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶಾ ಮಾದ್ಯಮಕ್ಕೆ ತಿಳಿಸಿದ್ದಾರೆ.