ಖಾಸಗಿ ಚಾನೆಲ್‌ನ ನಿರೂಪಕನಿಂದ ಪ್ರವಾದಿ ನಿಂದನೆ: ಉಳ್ಳಾಲ ದರ್ಗಾ ಸಮಿತಿಯಿಂದ ಖಂಡನಾ ಸಭೆ

ಮಂಗಳೂರು, ಡಿ.28: ಉಳ್ಳಾಲ ಮುಸ್ಲಿಂ ಜಮಾಅತ್ ಮತ್ತು ಸೈಯದ್ ಮದನಿ ದರ್ಗಾ ಆಡಳಿತ ಸಮಿತಿಯ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರನ್ನು ಅವಾಚ್ಯವಾಗಿ ನಿಂದಿಸಿದ ಖಾಸಗಿ ಚಾನೆಲ್ ನ ಮುಖ್ಯ ನಿರೂಪಕ ಅಜಿತ್‌ನನ್ನು ತಕ್ಷಣ ಕೆಲಸದಿಂದ ತೆಗೆಯಬೇಕು ಮತ್ತು ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಉಳ್ಳಾಲದಲ್ಲಿ ಖಂಡನಾ ಸಭೆ ನಡೆಯಿತು.
ಈ ಸಂದರ್ಭ ಮಾತನಾಡಿದ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಅಜಿತ್ ಹೇಳಿಕೆಯಿಂದ ಮುಸ್ಲಿಂ ಸಮುದಾಯ ಆಕ್ರೋಶಗೊಂಡಿವೆ. ಮುಂದೆ ಆಗುವ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಅಜಿತ್ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಇಲ್ಲಿ ಕೈಗೊಂಡ ನಿರ್ಣಯವನ್ನು ದ.ಕ.ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ತಲುಪಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದರು.
ಈ ಸಂದರ್ಭ ದರ್ಗಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಉಪಾಧ್ಯಕ್ಷರಾದ ಯು.ಕೆ.ಮೋನು ಇಸ್ಮಾಯೀಲ್, ಬಾವಾ ಮುಹಮ್ಮದ್, ಸದಸ್ಯರಾದ ಫಾರೂಕ್ ಉಳ್ಳಾಲ್, ಆಸೀಫ್ ಅಬ್ದುಲ್ಲ, ಇಬ್ರಾಹೀಂ ಹಾಜಿ ಕಕ್ಕೆತೋಟ, ಯು.ಪಿ ಅಬ್ಬಾಸ್ ಹಾಜಿ, ಮುಸ್ತಫಾ ಮಂಚಿಲ, ಮುಸ್ತಫಾ, ಯು.ಪಿ.ಹಮೀದ್, ಕೆ.ಎನ್.ಮುಹಮ್ಮದ್,ವಿ.ಸಿ.ಖಾಸಿಂ, ಮಯ್ಯದ್ದಿ ಕೋಡಿ, ಖಾಸಿಮ್ ಮತ್ತಿತರರು ಉಪಸ್ಥಿತರಿದ್ದರು.