ಸಂಘಸಂಸ್ಥೆಗಳು ದೂರು ನೀಡುವ ಕಾನೂನು ಕ್ರಮಕ್ಕೆ ಮುಂದಾಗಲಿ : ಯು ಟಿ ಖಾದರ್
ಸುದ್ದಿ ವಾಹಿನಿ ಪತ್ರಕರ್ತರಿಂದ ಪ್ರವಾದಿ ಅವಹೇಳನ ಖಂಡನೀಯ

ಮಂಗಳೂರು, ಡಿ. 28: ಸುದ್ದಿ ವಾಹಿನಿಯೊಂದರ ಪತ್ರಕರ್ತರೊಬ್ಬರು ಪ್ರವಾದಿ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂದು ಹೇಳಲಾಗಿದ್ದು ಇದು ಖಂಡನೀಯವಾಗಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ .
ಪ್ರವಾದಿಯವರು ಕೇವಲ ಮುಸ್ಲಿಂ ಸಮುದಾಯಕ್ಕೆ ಸೀಮಿತ ಅಲ್ಲ. ಅವರ ಆದರ್ಶ ಹಾಗು ಭೋದನೆಗಳನ್ನು ಇಡೀ ಮನುಕುಲವೇ ಆದರಿಸಿ, ಗೌರವಿಸುತ್ತದೆ. ಅಂತಹ ಆದರ್ಶ ವ್ಯಕ್ತಿಯ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಪತ್ರಕರ್ತರು ಅಗೌರವ ತೋರುವ ರೀತಿಯಲ್ಲಿ, ಬೇಜವಾಬ್ದಾರಿಯುತವಾಗಿ ಮಾತನಾಡಬಾರದು. ಪತ್ರಕರ್ತರಿಗೆ ದೊಡ್ಡ ಜವಾಬ್ದಾರಿಯಿದೆ. ಅವರು ಸಮಾಜದಲ್ಲಿ ಶಾಂತಿ, ನೆಮ್ಮದಿ ಹರಡಬೇಕೆ ವಿನಃ ಅಶಾಂತಿ ಹರಡುವ ಕೆಲಸ ಮಾಡಬಾರದು. ಪತ್ರಕರ್ತರ ಈ ಬೇಜವಾಬ್ದಾರಿಯುತ ಕೃತ್ಯದ ಬಗ್ಗೆ ವಾರ್ತಾ ಇಲಾಖೆ ಸಚಿವರ ಜೊತೆ ಚರ್ಚಿಸಲಾಗುವುದು ಎಂದು ಖಾದರ್ ಹೇಳಿದ್ದಾರೆ.
ಜನರು ಹಾಗು ಸಂಘ ಸಂಸ್ಥೆಗಳು ಈ ಬಗ್ಗೆ ಶಾಂತಿಯುತವಾಗಿ ಪ್ರತಿಕ್ರಿಯಿಸಿ ಇಂತಹ ನಡವಳಿಕೆ ಮತ್ತೆ ಪುನರಾವರ್ತನೆ ಆಗದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸಿ ಮುನ್ನಡೆಯುವುದು ಸೂಕ್ತ. ಪ್ರಚೋದನೆ ಹರಡುವ ಸಾಧ್ಯತೆ ಇರುವ ಪ್ರತಿಭಟನಾ ಸಭೆಗಳನ್ನು ಮಾಡುವುದಕ್ಕಿಂತ ಪೊಲೀಸರಿಗೆ ಮತ್ತು ಇತರ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡುವ ದೂರದೃಷ್ಟಿಯ ಕಾನೂನು ಕ್ರಮಗಳನ್ನು ಕೈಗೊಂಡು ಇಂತಹ ಕೃತ್ಯಗಳನ್ನು ಎದುರಿಸುವುದು ಸೂಕ್ತ ಎಂದು ಅವರು ಹೇಳಿದ್ದಾರೆ.