39 ವರ್ಷ ಹಳೆಯ ದಾಖಲೆ ಮುರಿದ ಬುಮ್ರಾ

ಮೆಲ್ಬೋರ್ನ್, ಡಿ.28: ಆಸ್ಟ್ರೇಲಿಯ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭರ್ಜರಿ ಬೌಲಿಂಗ್ ಮಾಡಿದ ಜಸ್‌ಪ್ರೀತ್ ಬುಮ್ರಾ ಮೂರನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರು. ಇದರೊಂದಿಗೆ 39 ವರ್ಷ ಹಳೆಯ ದಾಖಲೆಯೊಂದನ್ನು ಮುರಿದು ಮುನ್ನುಗ್ಗಿದರು.
ಈ ತನಕ 45 ವಿಕೆಟ್‌ಗಳನ್ನು ಉರುಳಿಸಿರುವ ಬುಮ್ರಾ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟ ವರ್ಷದಲ್ಲೇ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಮೂಲಕ ದಿಲೀಪ್ ದೋಶಿ ಹೆಸರಲ್ಲಿದ್ದ 39 ವರ್ಷ ಹಳೆಯ ದಾಖಲೆಯೊಂದನ್ನು ಪುಡಿಗಟ್ಟಿದರು. 1979ರಲ್ಲಿ ದಿಲೀಪ್ ತಾನು ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟ ವರ್ಷದಲ್ಲಿ 40 ವಿಕೆಟ್‌ಗಳನ್ನು ಪಡೆದಿದ್ದರು.
1996ರಲ್ಲಿ 37 ವಿಕೆಟ್‌ಗಳನ್ನು ಪಡೆದಿದ್ದ ವೆಂಕಟೇಶ್ ಪ್ರಸಾದ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ನರೇಂದ್ರ ಹಿರ್ವಾನಿ(36 ವಿಕೆಟ್, 1988) ಹಾಗೂ ಎಸ್.ಶ್ರೀಶಾಂತ್(2006,35 ವಿಕೆಟ್)ಟಾಪ್-5ರಲ್ಲಿ ಸ್ಥಾನ ಪಡೆದಿದ್ದಾರೆ.
ಬುಮ್ರಾ 2018ರಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಸಾಧನೆಯನ್ನು ಸಹ ಆಟಗಾರ ಮುಹಮ್ಮದ್ ಶಮಿ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಶುಕ್ರವಾರ ನಡೆದ 3ನೇ ಟೆಸ್ಟ್‌ನ 3ನೇ ದಿನದಾಟದಲ್ಲಿ ಬುಮ್ರಾ ಬೌಲಿಂಗ್‌ಗೆ ಮಾರ್ಕಸ್ ಹ್ಯಾರಿಸ್,ಶಾನ್ ಮಾರ್ಷ್, ಟ್ರಾವಿಡ್ ಹೆಡ್, ಟಿಮ್ ಪೈನ್,ನಥಾನ್ ಲಿಯೊನ್ ಹಾಗೂ ಜೋಶ್ ಹೆಝಲ್‌ವುಡ್ ಬಲಿಯಾದರು. ಕ್ಯಾಲೆಂಡರ್ ವರ್ಷದಲ್ಲಿ ಆಸ್ಟ್ರೇಲಿಯ, ಇಂಗ್ಲೆಂಡ್ ಹಾಗೂ ದ.ಆಫ್ರಿಕದಲ್ಲಿ 5 ವಿಕೆಟ್ ಗೊಂಚಲು ಪಡೆದ ಏಶ್ಯದ ಮೊದಲ ಬೌಲರ್ ಎನಿಸಿಕೊಂಡರು.
25ರ ಹರೆಯದ ಬುಮ್ರಾ ಬಿಗಿ ಬೌಲಿಂಗ್‌ನ ಮೂಲಕ ಆಸ್ಟ್ರೇಲಿಯದ ಬ್ಯಾಟಿಂಗ್ ಸರದಿಯನ್ನು ಭೇದಿಸಿದರು. 1985ರ ಬಳಿಕ ಕಾಂಗರೂನಾಡಿನಲ್ಲಿ ಶ್ರೇಷ್ಠ ಬೌಲಿಂಗ್ ಸಂಘಟಿಸಿದ ಶ್ರೇಯಸ್ಸಿಗೆ ಪಾತ್ರರಾದರು. ಜೀವನಶ್ರೇಷ್ಠ ಬೌಲಿಂಗ್(6/33)ಮಾಡಿದ ಬುಮ್ರಾ ಜನವರಿಯಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ನೀಡಿದ್ದ ಪ್ರದರ್ಶನ(5/54)ಉತ್ತಮಪಡಿಸಿಕೊಂಡರು.







