ಶ್ರೀಲಂಕಾ ಸೋಲಿಗೆ ಕಿವೀಸ್ ಮುನ್ನುಡಿ
ಟಾಮ್ ಲಥಮ್, ಹೆನ್ರಿ ನಿಕೊಲ್ಸ್ ಭರ್ಜರಿ ಶತಕ

ನ್ಯೂಝಿಲೆಂಡ್ ಹಾಗೂ ಶ್ರೀಲಂಕಾ ಮಧ್ಯೆದ 2ನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್‌ನ ಕಾಲಿನ್ ಡಿ ಗ್ರಾಂಡ್‌ಹೋಮ್ ದಾಖಲೆಯೊಂದಕ್ಕೆ ಪಾತ್ರರಾದರು. ನ್ಯೂಝಿಲೆಂಡ್ ಪರ ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯಂತ ವೇಗವಾಗಿ ಅರ್ಧಶತಕ ಸಿಡಿಸಿದ(28 ಎಸೆತ, 6 ಬೌಂಡರಿ, 1 ಸಿಕ್ಸರ್)ಸಾಧನೆ ಮಾಡಿದರು. ಈ ಹಿಂದೆ ಈ ದಾಖಲೆ ಟಿಮ್ ಸೌಥಿ ಹೆಸರಿನಲ್ಲಿತ್ತು. 10 ವರ್ಷಗಳ ಹಿಂದೆ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಸೌಥಿ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.
ಕಿವೀಸ್ ಪರ ಅತ್ಯಂತ ವೇಗದ ಟೆಸ್ಟ್ ಅರ್ಧಶತಕ ಸಿಡಿಸಿದ ಕಾಲಿನ್
ಕ್ರೈಸ್ಟ್‌ಚರ್ಚ್, ಡಿ.28: ಟಾಮ್ ಲಥಮ್ ಹಾಗೂ ಹೆನ್ರಿ ನಿಕೊಲ್ಸ್ ಅವರ ಭರ್ಜರಿ ಶತಕಗಳ ನೆರವಿನಿಂದ ನ್ಯೂಝಿಲೆಂಡ್ ತಂಡ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಗೆಲುವಿಗೆ ಅಡಿಗಲ್ಲು ಹಾಕಿದೆ. ಲಂಕಾ ಗೆಲುವಿಗೆ ಒಟ್ಟು 659 ರನ್‌ಗಳ ಗುರಿ ನೀಡಿರುವ ಕಿವೀಸ್, ಈಗಾಗಲೇ ದ್ವಿತೀಯ ಇನಿಂಗ್ಸ್‌ನಲ್ಲಿ 24 ರನ್‌ಗೆ ಪ್ರವಾಸಿಗರ ಎರಡು ವಿಕೆಟ್‌ಗಳನ್ನು ಕಬಳಿಸಿದೆ.
ಪ್ರಥಮ ಇನಿಂಗ್ಸ್‌ನಲ್ಲಿ 74 ರನ್‌ಗಳ ಮುನ್ನಡೆ ಪಡೆದಿದ್ದ ಕಿವೀಸ್, ಮೂರನೇ ದಿನದಾಟವಾದ ಶುಕ್ರವಾರ ಎರಡನೇ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗೆ ಒಟ್ಟು 585 ರನ್ ಮಾಡಿ ಡಿಕ್ಲೇರ್ ಮಾಡಿತು. ಲಥಮ್ ಭರ್ಜರಿ 176 ರನ್ ಬಾರಿಸಿದರೆ, ನಿಕೊಲ್ಸ್ ಅಜೇಯ 162 ರನ್, ಜೀತ್ ರಾವಲ್(74) ಹಾಗೂ ಗ್ರಾಂಡ್‌ಹೋಮ್ (ಅಜೇಯ 71) ನ್ಯೂಝಿಲೆಂಡ್‌ನ ಬೃಹತ್ ಮೊತ್ತಕ್ಕೆ ದೊಡ್ಡ ಕೊಡುಗೆ ನೀಡಿದರು. ಶ್ರೀಲಂಕಾದ ಪರ ಲಹಿರು ಕುಮಾರ 2 ವಿಕೆಟ್ ಪಡೆದರೆ ದುಷ್ಮಂತ್ ಚಾಮೀರ ಹಾಗೂ ಪೆರೇರ ತಲಾ ಒಂದು ವಿಕೆಟ್‌ಗೆ ತೃಪ್ತಿಪಟ್ಟರು.
ಬೃಹತ್ ಗೆಲುವಿನ ಗುರಿ ಬೆನ್ನಟ್ಟಿರುವ ಪ್ರವಾಸಿಗರು ತಮ್ಮ ದ್ವಿತೀಯ ಇನಿಂಗ್ಸ್‌ನಲ್ಲಿ ಈಗಾಗಲೇ 2 ವಿಕೆಟ್ ಕಳೆದುಕೊಂಡಿದ್ದಾರೆ. ದಿನೇಶ್ ಚಾಂಡಿಮಾಲ್ (14) ಹಾಗೂ ಕುಸಾಲ್ ಮೆಂಡಿಸ್(6) ಕ್ರೀಸ್ ಕಾಯ್ದುಕೊಂಡಿದ್ದಾರೆ. ಶ್ರೀಲಂಕಾದ ಸೋಲು ತಪ್ಪಲು ಪವಾಡವೇ ನಡೆಯಬೇಕಾಗಿದೆ.
ಒಂದು ವೇಳೆ ಈ ಪಂದ್ಯದಲ್ಲಿ ಆತಿಥೇಯರು ಜಯ ಸಾಧಿಸಿದರೆ ಅದು ಅವರ ಸತತ ನಾಲ್ಕನೇ ಸರಣಿ ಜಯವಾಗಲಿದೆ.







