ದುರ್ಬಲರೆಂಬ ಹಣೆಪಟ್ಟಿ ಕಳಚಿದ್ದೇವೆ
ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ

ಹೊಸದಿಲ್ಲಿ, ಡಿ.28: ಅಗ್ರಶ್ರೇಣಿಯ ತಂಡಗಳ ವಿರುದ್ಧ ಭಾರತ ಮಹಿಳಾ ಹಾಕಿ ತಂಡ ಈ ವರ್ಷ ಸಾಧಿಸಿದ ಒಂದಷ್ಟು ಗೆಲುವುಗಳು ತಂಡದಲ್ಲಿ ಹೊಸ ಆತ್ಮವಿಶ್ವಾಸ ತುಂಬಿಸಿದೆ. ಇದು ‘ಮಹಿಳಾ ತಂಡ ದುರ್ಬಲ’ ಎಂಬ ಹಣೆಪಟ್ಟಿ ಕಳಚಲು ಸಹಕಾರಿಯಾಗಿದೆ ಎಂದು ರಾಷ್ಟ್ರೀಯ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ವನಿತಾ ಹಾಕಿ ತಂಡ, 18ನೇ ಏಶ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿತ್ತು. ಅಲ್ಲದೆ ಈ ವರ್ಷದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ರಜತ ಪದಕ, ಲಂಡನ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಾಲ್ಕನೇ ಸ್ಥಾನದವರೆಗೂ ತಲುಪಿ ಅತ್ಯುತ್ತಮ ಸಾಧನೆ ಮಾಡಿತ್ತು.
‘‘ಏಶ್ಯನ್ ಗೇಮ್ಸ್ ಹಾಗೂ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವುದು ನಮ ಆದ್ಯತೆಯಾಗಿತ್ತು. ಆದರೂ 2018ರಲ್ಲಿ ನಾವು ಉತ್ತಮ ಸಾಧನೆ ಮಾಡಿದ್ದೇವೆ’ ಎಂದು ರಾಣಿ ಹೇಳಿದರು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 2-1 ಅಂತರದಿಂದ ಮಣಿಸಿದ್ದು, ಲಂಡನ್‌ನಲ್ಲಿ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ಆತಿಥೇಯ ತಂಡದೊಂದಿಗೆ 1-1 ಡ್ರಾ ಸಾಧಿಸಿದ್ದು ಹಾಗೂ ಗೋಲ್ಡ್‌ಕೋಸ್ಟ್‌ನಲ್ಲಿ ಸೆಮಿಫೈನಲ್‌ನಲ್ಲಿ ಆಸೀಸ್ ವಿರುದ್ಧ 0-1 ಕಡಿಮೆ ಅಂತರದ ಸೋಲು ಭಾರತ ಮಹಿಳಾ ತಂಡಕ್ಕೆ ಪ್ರಚಂಡ ಆತ್ಮವಿಶ್ವಾಸವನ್ನು ತುಂಬಿವೆ.







