ಇಂಗ್ಲೀಷ್ ವ್ಯಾಮೋಹದಿಂದ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿದೆ: ಸಚಿವ ಪುಟ್ಟರಂಗಶೆಟ್ಟಿ
ಬೆಟ್ಟಗೆರೆ ನಿಂಗಮ್ಮ ಬೊಮ್ಮಯ್ಯ ಸರಕಾರಿ ಪ್ರೌಢಶಾಲೆ ಬೆಳ್ಳಿಹಬ್ಬ

ಮೂಡಿಗೆರೆ, ಡಿ.28: ಖಾಸಗಿ ಶಾಲೆಗಳ ಪಠ್ಯಕ್ರಮದಲ್ಲಿ ಕೇಂದ್ರೀಯ ಸಿಲೆಬಸ್‍ನಲ್ಲಿ ಶಿಕ್ಷಣ ಕಲಿಕೆಗೆ ಇಂಗ್ಲೀಷ್ ಭಾಷೆ ಅಗತ್ಯವಿರುವ ಕಾರಣ, ಕನ್ನಡ ಕಲಿಕೆಗೆ ತಮ್ಮ ಮಕ್ಕಳನ್ನು ಪೋಷಕರು ಸರಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿರುವ ಕಾರಣ ಕನ್ನಡ ಶಾಲೆ ಮುಚ್ಚುವ ಪರಿಸ್ಥಿತಿಗೆ ಬಂದಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ತಿಳಿಸಿದರು.
ಶುಕ್ರವಾರ ತಾಲೂಕಿನ ಬೆಟ್ಟಗೆರೆ ಗ್ರಾಮದ ಶ್ರೀಮತಿ ನಿಂಗಮ್ಮ ಬೊಮ್ಮಯ್ಯ ಸರಕಾರಿ ಪ್ರೌಢಶಾಲೆ ಬೆಳ್ಳಿಹಬ್ಬ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಶಾಲೆ ಇರುವ ಪ್ರದೇಶದಲ್ಲಿ ವಸತಿ ನಿಲಯ ಅಗತ್ಯವಿರುವ ಕಡೆ ಅಧಿಕಾರಿಗಳು ಸರ್ವೆ ನಡೆಸಿ, ವರದಿ ನೀಡಿದರೆ ಅಂತಹ ಪ್ರದೇಶದಲ್ಲಿ ಹಾಸ್ಟೇಲ್ ನಿರ್ಮಿಸಲು ಸರಕಾರ ಬದ್ದವಿದೆ. ವಿದ್ಯಾಸಿರಿ ಯೋಜನೆಯಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ಸಹಾಯಧನ ಸೇರಿದಂತೆ ಸರಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅನುದಾನಗಳನ್ನು ಸಮರ್ಪಕವಾಗಿ ಒದಗಿಸಲು ಸಿದ್ಧ. ವಿದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ತೆರಳುವ ವಿದ್ಯಾರ್ಥಿಗಳಿಗೆ ಸಹಾಯಧನ ಒದಗಿಸಲು ಅವಕಾಶವಿದೆ ಎಂದು ತಿಳಿಸಿದರು.
ರಾಜಕಾರಣ ವ್ಯವಸ್ಥೆಯಲ್ಲಿ ಸುಳ್ಳು, ಭ್ರಷ್ಟಾಚಾರ ಮಿತಿ ಮೀರಿದೆ. ವಿದ್ಯೆ ಆಧುನಿಕತೆ ಕಡೆಗೆ ತಿರುಗಿ, ಬೆಳೆದಂತೆ ಭ್ರಷ್ಟಾಚಾರವೂ ಬೆಳೆಯುತ್ತಿದೆ. ಇದರಿಂದ ಜನತೆ ಕಷ್ಟಪಡುವ ಪರಿಸ್ಥಿತಿ ಉಂಟಾಗಿರುವುದು ಸಹಿಸಲು ಸಾಧ್ಯವಿಲ್ಲ. ಉತ್ತಮ ಶಿಕ್ಷಣ ಪಡೆಯುವ ಮೂಲಕ ಭ್ರಷ್ಟಾಚಾರ ಮತ್ತು ಸುಳ್ಳಿನ ರಾಜಕಾರಣವನ್ನು ಕೊನೆಗಾಡಿಸಲು ಕನ್ನಡ ಶಿಕ್ಷಣಕ್ಕೆ ಶಕ್ತಿಯಿದೆ. ಹಾಗಾಗಿ ಪೋಷಕರು ಕನ್ನಡ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಉತ್ತಮ ಶಿಕ್ಷಣ ದೊರಕುವಂತೆ ಮಾಡಬೇಕು ಎಂದು ನುಡಿದರು.
ಬೆಳ್ಳಿ ಹಬ್ಬ ಆಚರಣಾ ಸಮಿತಿ ಗೌರವ ಅಧ್ಯಕ್ಷ, ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ತಾಲೂಕಿನಲ್ಲಿ 51 ಕನ್ನಡ ಸರಕಾರಿ ಶಾಲೆ ಮುಚ್ಚಿದೆ. ಸರಕಾರಿ ಶಾಲೆಗಳೆಲ್ಲಾ ಮುಚ್ಚುವ ಸ್ಥಿತಿ ಬಂದರೆ ಕನ್ನಡ ಭಾಷೆಯನ್ನು ಉಳಿಸುವುದು ಹೇಗೆ ? ಕೇರಳದಲ್ಲಿ ಮಲಯಾಳಂ, ಮಂಗಳೂರಿನಲ್ಲಿ ತುಳು ಭಾಷೆ ಮೇಲೆ ಅಲ್ಲಿನವರಿಗೆ ಪ್ರೀತಿ ಇರುವುದರರಿಂದ ಆ ಭಾಷೆ ಉಳಿದಿದೆ. ಆದರೆ ಕನ್ನಡ ಭಾಷೆಯ ಮೇಲೆ ಕನ್ನಡಿಗರಿಗೆ ಪ್ರೀತಿ ಇಲ್ಲದಂತೆ ವರ್ತಿಸಬಾರದು. ಬೆಂಗಳೂರಿನಂತಹ ಮಹಾನಗರದಲ್ಲಿ ಕನ್ನಡ ಭಾಷೆ ತೀವ್ರ ಸಂಕಷ್ಟದ ಪರಿಸ್ಥಿತಿಗೆ ತಲುಪಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕನ್ನಡ ಶಾಲೆಗಳನ್ನು ಉಳಿಸಲು ಕನ್ನಡಿಗರು ಮುಂದಾಗಬೇಕು ಎಂದ ಅವರು, ಬೆಟ್ಟಗೆರೆ ಗ್ರಾಮದ ಈ ಶಾಲೆಯ 13 ಕೊಠಡಿಗಳ ಕಟ್ಟಡ ಮತ್ತಿತರ ಅಭಿವೃದ್ಧಿಗೆ ಸರಕಾರ ಸಾಕಷ್ಟು ಅನುದಾನ ಬಿಡುಗಡೆಗೊಳಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಈ ವೇಳೆ ಬೆಳ್ಳಿಬೆಳಕು ಸ್ಮರಣೆ ಸಂಚಿಕೆ ಮತ್ತು ಶಾಲಾ ಲಾಂಛನ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಂ.ಪಿ.ಕುಮಾರಸ್ವಾಮಿ ವಹಿಸಿದ್ದರು.
ಮಾಜಿ ವಿಧಾನಸಭಾಧ್ಯಕ್ಷ ಡಿ.ಬಿ.ಚಂದ್ರೇಗೌಡ, ಮಾಜಿ ಸಚಿವೆ ಮೋಟಮ್ಮ, ಕರ್ನಾಟಕ ಪಶುವೈದ್ಯಕೀಯ ವಿಶ್ರಾಂತ ಕುಲಪತಿ ಡಾ.ಆರ್.ಎನ್.ಶ್ರೀನಿವಾಸ್‍ಗೌಡ, ಕೃಷಿ ವಿಜ್ಞಾನ ಕೇಂದ್ರದ ವಿಶ್ರಾಂತ ಕುಲಪತಿ ಡಾ.ಎಚ್.ಶಿವಣ್ಣ, ರಾಜ್ಯ ಒಲಂಪಿಕ್ಸ್ ಸ್ಪೋರ್ಟ್ಸ್ ಕೊ ಮಾಲಕ ಭಕ್ತವತ್ಸಲ, ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಮಂಡ್ಯ ಜಿಲ್ಲೆಯ ಮಳವಳ್ಳಿ ಶಾಸಕ ಡಾ.ಅನ್ನದಾನಿ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ತಾ.ಪಂ. ಅಧ್ಯಕ್ಷ ಕೆ.ಸಿ.ರತನ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್ ಕುಮಾರ್, ಬೆಟ್ಟಗೆರೆ ಗ್ರಾ.ಪಂ. ಅಧ್ಯಕ್ಷೆ ಮಮತ ರಾಜ್ ಮೋಹನ್, ಉಪಾಧ್ಯಕ್ಷೆ ಪೂರ್ಣಿಮಾ, ಜಿ.ಪಂ. ಸದಸ್ಯರಾದ ಜೆಸಿಂತ ಅನಿಲ್ ಕುಮಾರ್, ಕೆ.ಆರ್.ಪ್ರಭಾಕರ್, ಸುಧಾ ಯೋಗೇಶ್, ಶಾಮಣ್ಣ, ನಿಕಿಲ್ ಚಕ್ರವರ್ತಿ, ಅಮಿತಾ ಮುತ್ತಪ್ಪ, ತಾ.ಪಂ. ಸದಸ್ಯರಾದ ದೇವರಾಜು, ರಂಜನ್ ಅಜಿತ್ ಕುಮಾರ್, ಎಸ್‍ಡಿಎಂಸಿ ಅಧ್ಯಕ್ಷ ಬಿ.ಎಂ.ಮಂಜುನಾಥ್, ತ್ರಿವೇಣಿ ಬಿ.ಬಿ.ನಿಂಗಯ್ಯ, ಸಂಪತ್ ಬೆಟ್ಟಗೆರೆ, ತಹಶೀಲ್ದಾರ್ ಪದ್ಮನಾಭ ಶಾಸ್ತ್ರಿ, ಇಒ ವೆಂಕಟೇಶ್, ಬಿಇಒ ತಾರನಾಥ್, ಮುಖ್ಯ ಶಿಕ್ಷಕ ರಾಜ್‍ಕುಮಾರ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜು, ಬೆಳ್ಳಿಹಬ್ಬದ ಮಹಾ ಪೋಷಕ ಸುಬ್ಬೇಗೌಡ, ಬಿ.ಆರ್.ಸುಬ್ಬಯ್ಯ, ಒ.ಎಸ್.ಗೋಪಾಲಗೌಡ, ಬಿ.ಆರ್.ಯತೀಶ್, ಬಿ.ಎಂ.ಶಂಕರ್, ಬಕ್ಕಿ ಮಂಜು, ಬೆಟಗೆರೆ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡಕ್ಕಿಂತ ಇಂಗ್ಲೀಷಿನಲ್ಲಿ ಮಕ್ಕಳಲ್ಲಿ ಬುದ್ಧಿವಂತಿಕೆ ಹುಟ್ಟಲಾರದು. ಮುಂದಿನ ಶೈಕ್ಷಣಿಕ ಸಾಲಿನ ಆರಂಭದಲ್ಲೇ ಕನ್ನಡ ಶಾಲೆಗಳಲ್ಲಿ ಇಂಗ್ಲೀಷ್ ಪಠ್ಯಕ್ರಮ ಸೇರಿಸಿ ಸರಕಾರಿ ಶಾಲೆಗಳ ಪುನರುಜ್ಜೀವನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.
-ಡಾ.ಅನ್ನದಾನಿ, ಮಳವಳ್ಳಿ ಶಾಸಕ







