ಟೆನಿಸ್ ತ್ಯಜಿಸದಿರುವುದು ಸಂತಸದ ಸಂಗತಿ: ಮರ್ರೆ
ಪ್ಯಾರಿಸ್, ಡಿ.28: ಗಾಯದ ಸಮಸ್ಯೆಯಿಂದ ಸುಮಾರು 11 ತಿಂಗಳುಗಳ ಕಾಲ ಟೆನಿಸ್‌ನಿಂದ ದೂರವಿದ್ದ ವಿಶ್ವದ ಮಾಜಿ ನಂ.1 ಆಟಗಾರ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ, ‘‘ತಾನು ಟೆನಿಸ್‌ನಿಂದ ಶಾಶ್ವತವಾಗಿ ಹಿಂದೆ ಸರಿಯಲಿಲ್ಲ ಎಂಬುದೇ ಸಂತೋಷದ ಸಂಗತಿ’’ ಎಂದು ಹೇಳಿದ್ದಾರೆ.
ಸೋಮವಾರದಿಂದ ಆರಂಭವಾಗಲಿರುವ ಬ್ರಿಸ್ಬೇನ್ ಅಂತರ್‌ರಾಷ್ಟ್ರೀಯ ಟೂರ್ನಿಗೆ ಮರಳುತ್ತಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸೊಂಟನೋವಿನಿಂದಾಗಿ ಟೆನಿಸ್‌ನಿಂದ ದೂರ ಸರಿದಿದ್ದರ ಕುರಿತು ತನಗೆ ಯಾವುದೇ ವಿಷಾದವಿಲ್ಲ ಎಂದರು.
ಮರ್ರೆ 2012 ಹಾಗೂ 2013ರಲ್ಲಿ ಬ್ರಿಸ್ಬೇನ್ ಅಂತರ್‌ರಾಷ್ಟ್ರೀಯ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.31 ವರ್ಷದ ಮರ್ರೆ, 2018ರ ಆರಂಭದಲ್ಲಿ ಬ್ರಿಸ್ಬೇನ್ ಟೂರ್ನಿಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರೂ ಗಾಯದ ಕಾರಣದಿಂದ ಹಿಂದೆ ಸರಿದಿದ್ದರು. ಇದಾದ ಕೆಲವೇ ದಿನಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ವರ್ಷದ ಬಹುತೇಕ ದಿನ ಟೆನಿಸ್ ಆಡಿರಲಿಲ್ಲ. ವಿಶ್ವ ನಂ.1 ತಾರೆ ರಫೆಲ್ ನಡಾಲ್, ಜಪಾನ್ ತಾರಾ ಆಟಗಾರ ಕಿ ನಿಶಿಕೊರಿ ಹಾಗೂ ಟೂರ್ನಿಯ ಹಾಲಿ ಚಾಂಪಿಯನ್ ನಿಕ್ ಕಿರ್ಗಿಯೊಸ್ ಮುಂಬರುವ ಟೂರ್ನಿಯಲ್ಲಿ ಭಾಗವಹಿಸುತ್ತಿರುವುದು ವಿಶೇಷ ಆಕರ್ಷಣೆಯಾಗಿದೆ.







