ಸೊಹ್ರಬುದ್ದೀನ್ ಹತ್ಯೆ ಪ್ರಕರಣ: ಸಿಬಿಐ ಮೇಲೆಯೇ ಕೋರ್ಟ್ ಕೆಂಗಣ್ಣು !
ಮುಂಬೈ, ಡಿ. 29: ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದ ಸೊಹ್ರಬುದ್ದೀನ್ ಶೇಖ್ (38) ಹಾಗೂ ಪತ್ನಿ ಕೌಸರ್ ಅವರ ಸಹಚರ ತುಳಸೀರಾಂ ಪ್ರಜಾಪತಿ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಕಳೆದ ವಾರ ಎಲ್ಲ 22 ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು. ಆದರೆ ಸಿಬಿಐ ಈ ಪ್ರಕರಣದಲ್ಲಿ ಸತ್ಯ ಹುಡುಕುವ ಬದಲು, ತನ್ನ ಪೂರ್ವನಿರ್ಧರಿತ ಸಿದ್ಧಾಂತದಂತೆ ರಾಜಕೀಯ ನಾಯಕರನ್ನು ಸಿಲುಕಿಸಿ ಹಾಕುವ ಪ್ರಯತ್ನ ಮಾಡಿತು ಎಂದು ನ್ಯಾಯಾಲಯ ಗಂಭೀರ ಆರೋಪ ಮಾಡಿದೆ.
350 ಪುಟಗಳ ಸುಧೀರ್ಘ ತೀರ್ಪಿನ ಪ್ರತಿ ಟೈಮ್ಸ್ ಆಫ್ ಇಂಡಿಯಾಗೆ ಲಭ್ಯವಾಗಿದ್ದು, "ಈ ಅಪರಾಧಗಳ ತನಿಖೆ ವೇಳೆ, ಸಿಬಿಐ ಸತ್ಯಶೋಧನೆಯನ್ನು ಬಿಟ್ಟು ಮತ್ತೇನನ್ನೋ ಮಾಡಲು ಮುಂದಾಗಿತ್ತು ಎಂದು ಹೇಳಲು ಯಾವ ಹಿಂಜರಿಕೆಯೂ ಇಲ್ಲ" ಎಂದು ಸಿಬಿಐ ವಿಶೇಷ ನ್ಯಾಯಾಧೀಶ ಎಸ್.ಜೆ.ಶರ್ಮಾ ಹೇಳಿದ್ದಾರೆ.
ಡಿಸೆಂಬರ್ 21ರಂದು ನೀಡಿದ ತೀರ್ಪಿನಲ್ಲಿ ನ್ಯಾಯಾಲಯ ಎಲ್ಲ 22 ಮಂದಿ ಆರೋಪಿಗಳನ್ನು ಅಂದರೆ ಗುಜರಾತ್, ರಾಜಸ್ಥಾನ ಹಾಗೂ ಆಂಧ್ರಪ್ರದೇಶ ಪೊಲೀಸ್ ಸಿಬ್ಬಂದಿಯನ್ನು ದೋಷಮುಕ್ತಗೊಳಿಸಿತ್ತು. ಎನ್ಕೌಂಟರ್ಗೆ ಒಳಗಾದ ಮೂವರನ್ನು ಪೊಲೀಸರು ಅಪಹರಿಸಿ ಹತ್ಯೆ ಮಾಡಿದ್ದಾರೆ ಎನ್ನುವುದು ಸಿಬಿಐ ವಾದವಾಗಿತ್ತು.
ಒಂದು ವರ್ಷದ ಕಾಲ ನಡೆದ ವಿಚಾರಣೆಯಲ್ಲಿ 210 ಸಾಕ್ಷಿಗಳ ಪೈಕಿ 92 ಸಾಕ್ಷಿಗಳು ವ್ಯತಿರಿಕ್ತ ಹೇಳಿಕೆ ನೀಡಿದ್ದರು. ಇದು ಸಿಬಿಐ ಪುರಾವೆಗಳನ್ನು ಸೃಷ್ಟಿಸಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಾಕ್ಷಿಗಳಲ್ಲಿ ಭೀತಿ ಹುಟ್ಟಿಸಿ ಅವರಿಂದ ಹೇಳಿಕೆ ಪಡೆದಿದ್ದನ್ನು ನ್ಯಾಯಾಲಯದಲ್ಲಿ ನಿರೂಪಿಸಲು ಸಾಧ್ಯವಾಗಿಲ್ಲ. ಉನ್ನತ ರಾಜಕಾರಣಿಗಳನ್ನು ಸಿಲುಕಿಸುವ ಸಲುವಾಗಿ ಮತ್ತು ತನ್ನ ವಾದವನ್ನು ಸಮರ್ಥಿಸುವ ಸಲುವಾಗಿ ಈ ಹೇಳಿಕೆ ಸೃಷ್ಟಿಸಲಾಗಿದೆ ಎಂದು ಆಕ್ಷೇಪಿಸಿದೆ.
ಈ ಹಿಂದಿನ ನ್ಯಾಯಾಧೀಶ ಎಂ.ಬಿ.ಗೋಸಾವಿಯವರು, ಪ್ರಕರಣದ ಆರೋಪಿ ಸಂಖ್ಯೆ 16 ಆಗಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ದೋಷಮುಕ್ತಗೊಳಿಸಿ ನೀಡಿದ ತೀರ್ಪಿನ ವೇಳೆ ಕೂಡಾ ಈ ತನಿಖೆ ರಾಜಕೀಯ ಪ್ರೇರಿತವಾಗಿತ್ತು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.