ಪೊಲೀಸರು ವಶ ಪಡಿಸಿದ್ದ 1,000ಕ್ಕೂ ಅಧಿಕ ಲೀಟರ್ ಮದ್ಯವನ್ನು ‘ಇಲಿಗಳು’ ಕುಡಿದಿವೆಯಂತೆ !
ಲಕ್ನೋ,ಡಿ.29: ಹಲವಾರು ಅಕ್ರಮ ಮದ್ಯ ತಯಾರಿ ಘಟಕಗಳ ಮೇಲೆ ನಡೆದ ದಾಳಿಗಳ ಸಂದರ್ಭ ವಶಪಡಿಸಿಕೊಳ್ಳಲಾಗಿದ್ದ 1,000ಕ್ಕೂ ಅಧಿಕ ಲೀಟರ್ ಮದ್ಯವನ್ನು ಬರೇಲಿಯ ಕೆಂಟೋನ್ಮೆಂಟ್ ಪೊಲೀಸ್ ಠಾಣೆಯ ಕೊಠಡಿಯೊಂದರಲ್ಲಿ ಶೇಖರಿಸಿಡಲಾಗಿತ್ತು. ಇತ್ತೀಚೆಗೆ ಈ ಕೊಠಡಿಯೊಳಗೆ ನಾಯಿಯೊಂದು ಅಕಸ್ಮಾತ್ ಆಗಿ ನುಗ್ಗಿ ಅಲ್ಲಿಯೇ ಸತ್ತಿದ್ದರಿಂದ ಅದರ ಮೃತ ದೇಹ ಹೊರಹಾಕಲು ಕೊಠಡಿಯ ಬಾಗಿಲು ತೆರೆದಾಗ ಅಲ್ಲಿ ಶೇಖರಿಸಿಡಲಾಗಿದ್ದ ಹಲವಾರು ಮದ್ಯದ ಕ್ಯಾನುಗಳು ಖಾಲಿಯಾಗಿದ್ದವು. ಏನಾಯಿತೆಂದು ಪೊಲೀಸರಲ್ಲಿ ಕೇಳಿದಾಗ ಅವರು ದೂರಿದ್ದು ಇಲಿಗಳನ್ನು.
ಇದೀಗ ಈ ಮದ್ಯ ನಾಪತ್ತೆ ಪ್ರಕರಣದ ತನಿಖೆ ನಡೆಸಲಾಗುವುದೆಂದು ಎಸ್ಪಿ ಅಭಿನಂದನ್ ಸಿಂಗ್ ಹೇಳಿದ್ದಾರಲ್ಲದೆ ಮದ್ಯವನ್ನು ಇಲಿಗಳು ಕುಡಿದಿವೆಯೇ ಅಥವಾ ಬೇರಿನ್ನೇನಾದರೂ ಅಕ್ರಮ ನಡೆದಿದೆಯೇ ಎಂದು ತನಿಖೆ ಪತ್ತೆ ಹಚ್ಚುವುದು ಎಂದು ಅವರು ಹೇಳಿದ್ದಾರೆ. ಪೊಲೀಸ್ ಠಾಣೆಗೆ ಇತ್ತೀಚೆಗೆ ನೇಮಕಗೊಂಡಿದ್ದ ಗುಮಾಸ್ತ ಕೊಠಡಿಯ ಬಾಗಿಲು ತೆರೆದಾಗ ಮದ್ಯದ ಕ್ಯಾನುಗಳ ಸಮೀಪ ಇಲಿಗಳಿದ್ದುದನ್ನು ಕಂಡಿದ್ದರೆಂದು ಎಸ್ಪಿ ತಿಳಿಸಿದ್ದಾರೆ.
ಅಷ್ಟಕ್ಕೂ ವಶಪಡಿಸಿಕೊಳ್ಳಲಾದ ಮದ್ಯ ನಾಪತ್ತೆಯಾಗುತ್ತಿರುವುದು ಇದೇ ಮೊದಲ ಬಾರಿಯಲ್ಲ. ಕಳೆದ ವರ್ಷ ಬಿಹಾರದಲ್ಲಿ ಹೀಗೆ ವಶಪಡಿಸಿಕೊಳ್ಳಲಾಗಿದ್ದ 9 ಲಕ್ಷ ಲೀಟರಿಗೂ ಅಧಿಕ ಮದ್ಯವನ್ನು ಇಲಿಗಳು ಕುಡಿದಿದ್ದವೆಂದು ಹೇಳಲಾಗಿತ್ತು.
ನೀರಿಲ್ಲದ ಸ್ಥಳದಲ್ಲಿರುವ ಇಲಿಗಳು ಮದ್ಯ ಸೇವಿಸುವ ಸಾಧ್ಯತೆಯಿದೆ ಎಂದು ತಮ್ಮ ಹೆಸರು ಹೇಳಲಿಚ್ಛಿಸದ ಪ್ರಾಣಿಶಾಸ್ತ್ರದ ನಿವೃತ್ತ ಪ್ರೊಫೆಸರ್ ಒಬ್ಬರು ಹೇಳಿದ್ದಾರೆ.