‘ಸಂಗೀತಂ’ ಕ್ಪು ಬಿಳುಪು ಛಾಯಾಚಿತ್ರ ಪ್ರದರ್ಶನ

ಮಂಗಳೂರು, ಡಿ.29: ಪತ್ರಕರ್ತ, ಛಾಯಾಚಿತ್ರ ಕಲಾವಿದ ಶೇಣಿ ಮುರಳಿ ಅವರ ಕಪ್ಪು ಬಿಳುಪು ಕಲಾತ್ಮಕ ಛಾಯಾಚಿತ್ರಗಳ ಪ್ರದರ್ಶನ ‘ಸಂಗೀತಂ’ ನಗರದ ಪ್ರಸಾದ್ ಆರ್ ಗ್ಯಾಲರಿಯಲ್ಲಿ ಶನಿವಾರ ನಡೆಯಿತು.
ಬಿಬಿಸಿ ವನ್ಯಜೀವಿ ಫೋಟೋಗ್ರಫಿ-2016 ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ಛಾಯಾಚಿತ್ರ ಕಲಾವಿದ ಗಣೇಶ್ ಎಚ್.ಶಂಕರ್ ಪ್ರದರ್ಶನ ಉದ್ಘಾಟಿಸಿ, ಶುಭ ಹಾರೈಸಿದರು. ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ನರೇಂದ್ರ ಎಲ್.ನಾಯಕ್ ಮುಖ್ಯ ಅತಿಥಿಯಾಗಿದ್ದರು. ಕಲಾವಿದನಿಗೆ ನೈಪುಣ್ಯತೆ ಅವಶ್ಯ. ಶೇಣಿ ಮುರಳಿ ಅವರು ಆ ನೈಪುಣ್ಯತೆಯನ್ನು ಮೈಗೂಡಿಸಿಕೊಂಡಿದ್ದಾರೆ. ಕಲೆಯನ್ನು ಅನುಭವಿಸಿದಾಗ ಮನಸ್ಸಿಗೆ ಮುದ ನೀಡುತ್ತದೆ ಎಂದವರು ಹೇಳಿದರು.
ಸಿತಾರ್ ಕಲಾವಿದ ಉಸ್ತಾದ್ ರಫೀಕ್ ಖಾನ್, ಹಿರಿಯ ಚಿತ್ರ ಕಲಾವಿದ ಕೋಟಿ ಪ್ರಸಾದ್ ಆಳ್ವ, ವಿಜಯವಾಣಿ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕ ಸುರೇಂದ್ರ ಎಸ್.ವಾಗ್ಳೆ, ಛಾಯಾಚಿತ್ರ ಕಲಾವಿದ ಮಹೇಶ್ ತೇಜಸ್ವಿ ಅವರು ಅತಿಥಿಗಳಾಗಿದ್ದರು. ಚಿತ್ರ ಪ್ರದರ್ಶನಕ್ಕೆ ಆಗಮಿಸಿದವರಿಗೆ ಅದೃಷ್ಟ ಚೀಟಿ ಆಯೋಜಿಸಲಾಗಿತ್ತು. ಪ್ರದರ್ಶನದ ಅಂತ್ಯದಲ್ಲಿ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಪ್ರದರ್ಶನದಲ್ಲಿದ್ದ ಅವರ ಆಯ್ಕೆಯ ಚಿತ್ರವನ್ನು ನೀಡಲಾಯಿತು.
ಡಾ.ಪದ್ಮಾ ಸುಬ್ರಹ್ಮಣ್ಯಂ, ಸಿ.ವಿ.ಚಂದ್ರಶೇಖರ್, ರಾಧಿಕಾ ಶೆಟ್ಟಿ, ಧನಂಜಯನ್ಸ್, ಡಾ.ಸೌಂದರ್ಯ ಶ್ರೀವತ್ಸ, ಪಾರ್ಶ್ವನಾಥ ಉಪಾಧ್ಯಾಯ, ಮೀನಾಕ್ಷಿ ಶ್ರೀನಿವಾಸನ್, ಡಾ.ಸರೋಜ ವೈದ್ಯನಾಥನ್, ಶೀ ಲಕ್ಷ್ಮೀ ಗೋವರ್ಧನ್, ರಮಾ ವೈದ್ಯನಾಥನ್, ಪಿ.ಉನ್ನಿಕೃಷ್ಣನ್, ಟಿ.ಎಂ.ಕೃಷ್ಣ, ಶಂಕರ್ ಮಹಾದೇವನ್ ಸೇರಿದಂತೆ 25ಕ್ಕೂ ಅಧಿಕ ಕಲಾವಿದರ ನೃತ್ಯ ಹಾಗೂ ಸಂಗೀತದ ಕಪ್ಪು ಬಿಳುಪು ಚಿತ್ರಗಳು ಆಕರ್ಷಿಸಿದವು.