ಸಂಸದರ ಕೊಡುಗೆ ದಾಖಲೆ ಸಹಿತ ಸಾಬೀತುಪಡಿಸಲಿ: ವಿನಯರಾಜ್

ಮಂಗಳೂರು, ಡಿ.29 : ಸಂಸದನಾಗಿ ನಳಿನ್ ಕುಮಾರ್ ಕಟೀಲ್ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿರುವ ಕೊಡುಗೆಯ ಬಗ್ಗೆ ಮಾಧ್ಯಮಗಳಲ್ಲಿ ದಾಖಲೆ ಬಿಡುಗಡೆ ಮಾಡುವ ಮೂಲಕ ಸಾಬೀತು ಪಡಿಸಬೇಕೆಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಎ.ಸಿ. ವಿನಯರಾಜ್ ಆಗ್ರಹಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಂಸದನಾಗಿ ಅವರು ಜಿಲ್ಲೆಗೆ ಕೊಟ್ಟ ಕೊಡುಗೆ ಶೂನ್ಯ ಎಂದು ಟೀಕಿಸಿದರು.
ನಳಿನ್ ಕುಮಾರ್ ಕಟೀಲ್ ಸುಮಾರು ಒಂಭತ್ತೂವರೆ ವರ್ಷಗಳಿಂದ ಮಂಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ. ಅವರ ಕ್ಷೇತ್ರಾಭಿವೃದ್ಧಿ ನಿಧಿ ಪ್ರತೀ ವರ್ಷ 5 ಕೋ.ರೂ. ಹೊರತುಪಡಿಸಿ ಅವರು ಯಾವುದೇ ಹೆಚ್ಚುವರಿ ಹಣಕಾಸನ್ನು ಯೋಜನೆಗಳಿಗೆ ತಂದ ನಿದರ್ಶನಗಳಿಲ್ಲ. ಆದರೆ ಸುಮಾರು 14 ಸಾವಿರ ಕೋ.ರೂ. ಅನುದಾನವನ್ನು ತಂದಿದ್ದೇನೆ ಎಂದು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದು ಬಿಟ್ಟು ಅದಕ್ಕೆ ಪೂರಕವಾದ ದಾಖಲೆಗಳನ್ನು ಬಿಡುಗೆಮಾಡಿಲ್ಲ ಎಂದವರು ಆರೋಪಿಸಿದರು.
ನವಮಂಗಳೂರು ಬಂದರು ಹಾಗೂ ವಿಮಾನನಿಲ್ದಾಣವನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರಕಾರ ಹೊರಟಿದ್ದು ಇದರ ಬಗ್ಗೆ ಸಂಸದರು ಯಾವುದೇ ಧ್ವನಿಯೆತ್ತಿಲ್ಲ. ಪಂಪ್‌ವೆಲ್ ಹಾಗೂ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಗಳು ಅಮೆಗತಿಯಲ್ಲಿ ಸಾಗುತ್ತಿದೆ. ಬಿ.ಸಿ.ರೋಡಿನಿಂದ ಗುಂಡ್ಯವರೆಗಿನ ರಾಷ್ಟೀಯ ಹೆದ್ದಾರಿ ಚತುಷ್ಪಥಗೊಳಿಸುವ ಯೋಜನೆಯು ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಇದ್ದಂತಹ ಸಂದರ್ಭದಲ್ಲಿ ಕಾರ್ಯರೂಪಕ್ಕೆ ಬಂದಿದ್ದು ಈ ಯೋಜನೆಯು ಈಗ ಸ್ಥಗಿತಗೊಂಡಿದೆ ಎಂದು ಅವರು ದೂರಿದರು.
ಲೋಕಸಭಾ ಚುನಾವಣೆಗೆ ಹಿನ್ನೆಲೆಯಲ್ಲಿ ಇದೀಗ ಟೀಮ್ ಮೋದಿ ಎಂಬ ಸಂಘಟನೆಯನ್ನು ಹುಟ್ಟುಹಾಕಿ ಜಿಲ್ಲೆಯ ಜನರನ್ನು ಭಾವನೆಗಳ ಬಲೆಯಲ್ಲಿ ಬಂಧಿಸಿ ಬಿಜೆಪಿಯ ಗೆಲುವಿಗೆ ಪ್ರಯತ್ನಿಸಲಾಗುತ್ತಿದೆ. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ಈ ಜಿಲ್ಲೆಗೆ ನೀಡಿರುವ ಕೊಡುಗೆಗಳು ಏನು ಎಂಬುದನ್ನು ಟೀಮ್ ಮೋದಿ ವಿವರಿಸಲಿ ಎಂದರು.
ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಉಪಾಧ್ಯಕ್ಷ ರಮಾನಂದ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನಜೀರ್ ಬಜಾಲ್, ಕಾರ್ಪೊರೇಟರ್ ಅಪ್ಪಿ ಅವರು ಉಪಸ್ಥಿತರಿದ್ದರು.