ಬರ, ಅತಿವೃಷಿ ಪರಿಹಾರ ನೀಡಲು ಕೇಂದ್ರದ ನೆರವಿನ ನಿರೀಕ್ಷೆಯಲ್ಲಿದ್ದೇವೆ: ಸಚಿವ ಶಿವಶಂಕರ್ ರೆಡ್ಡಿ

ಚಿಕ್ಕಮಗಳೂರು, ಡಿ.29: ರಾಜ್ಯದಲ್ಲಿ ಬರಕ್ಕೆ ತುತ್ತಾಗಿರುವ ಜಿಲ್ಲೆ, ತಾಲೂಕುಗಳ ಎರಡನೇ ಹಂತದ ಪಟ್ಟಿಯ ಘೋಷಣೆ ರಾಜ್ಯ ಸರಕಾರ ಬಿಡುಗಡೆ ಮಾಡಿದ್ದು, ಬರ ಪರಿಹಾರ ಸಂಬಂಧ ಸರಕಾರ ಅಗತ್ಯ ಪರಿಹಾರ ಧನವನ್ನುನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಿದೆ. ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಾಗಿರುವ ಆಸ್ತಿಪಾಸ್ತಿ, ಬೆಳೆ ನಷ್ಟ ಪರಿಹಾರ ನೀಡುವ ಸಲುವಾಗಿ ಕೇಂದ್ರ ಸರಕಾರದೊಂದಿಗೆ ಚರ್ಚಿಸಲಾಗಿದ್ದು, ಕೇಂದ್ರ ಸರಕಾರ ಸೂಕ್ತ ಪರಿಹಾರ ಧನ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿ ರಾಜ್ಯ ಸರಕಾರವಿದೆ ಎಂದ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಆಯೋಜಿಸಲಾಗಿದ್ದ ಸಾವಯವ ಕೃಷಿ ಮೇಳ ಉದ್ಘಾಟನಾ ಕಾರ್ಯಕ್ರಮದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅತೀವೃಷ್ಟಿ ಪರಿಹಾರಕ್ಕಾಗಿ ಕೇಂದ್ರ ಸರಕಾರಕ್ಕೆ 2464 ಕೋ. ರೂ. ಬಿಡುಗಡೆ ಮಾಡುವಂತೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಕೇಂದ್ರ ಅಷ್ಟು ಹಣ ಬಿಡುಗಡೆ ಮಾಡಲು ಮುಂದಾಗುವುದಿಲ್ಲ. ಕನಿಷ್ಠ 10-15 ಕೋ. ರೂ. ವನ್ನಾದರೂ ಬಿಡುಗಡೆ ಮಾಡುತ್ತದೆ ಎಂದು ರಾಜ್ಯ ಸರಕಾರ ನಿರೀಕ್ಷೆ ಹೊಂದಿದ್ದು, ಬೆಳೆ ನಷ್ಟ ಪರಿಹಾರವನ್ನು ಕೇಂದ್ರ ಬಿಡುಗಡೆ ಮಾಡಿದಲ್ಲಿ ಈ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ಬರಲಿದೆ. ಎನ್‍ಡಿಆರ್‍ಎಫ್ ನಿಧಿಯಿಂದಲೂ 350 ಕೋ. ರೂ. ನಷ್ಟು ಪರಿಹಾರ ಬರಬೇಕಿತ್ತು. ಈ ಹಣಕ್ಕೂ ರಾಜ್ಯ ಸರಕಾರ ನಿರೀಕ್ಷೆಯಲ್ಲಿದೆ ಎಂದರು.
ಈ ಬಾರಿ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿವೃಷ್ಟಯಿಂದಾಗಿ ಭಾರಿ ನಷ್ಟ ಸಂಭವಿಸಿದೆ. ಕೆಲ ಜಿಲ್ಲೆಗಳಿಗೆ ಸರಕಾರ ಮೊದಲ ಹಂತದ ಪರಿಹಾರ ಧನ ಬಿಡುಗಡೆಯಾಗಿದೆ. ಕೊಡಗು ಜಿಲ್ಲೆಗೆ ಕೇಂದ್ರ ಸರಕಾರ 500 ಕೋ. ರೂ. ಪರಿಹಾರ ನೀಡಿದೆ. ಚಿಕ್ಕಮಗಳೂರು ಜಿಲ್ಲೆಗೆ ಪರಿಹಾರ ಬಿಡುಗಡೆಯಾಗಿಲ್ಲ ಎಂಬ ಮಾಹಿತಿ ಇದ್ದು, ಈ ಸಂಬಂಧ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುತ್ತೇನೆಂದ ಅವರು, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರಕಾರ ಸಾವಯವ ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದು, ಈ ಬಗ್ಗೆ ಜಾಗೃತಿಗಾಗಿ ಸಾವಯವ, ಸಿರಿಧಾನ್ಯ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ಬಜೆಟ್‍ನಲ್ಲಿ ಸಾವಯವ ಕೃಷಿ ಮತ್ತು ಸಿರಿಧಾನ್ಯ ಕೃಷಿಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಧಾರಿತ ಕೃಷಿ ಇದ್ದರೂ ಇತ್ತೀಚೆಗೆ ಮಳೆ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆಗಳು ಜಾರಿಯಾಗದಿರುವುದರಿಂದ ನೀರಾವರಿ ಸಮಸ್ಯೆ ಎದುರಾಗಿದೆ. ಈ ಸಂಬಂಧ ಸ್ಥಳೀಯ ಶಾಸಕರು ಸರಕಾರದ ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲಿ ಶಾಶ್ವತ ನೀರಾವರಿ ಕಲ್ಪಿಸಲು ಸರಕಾರ ಅಗತ್ಯ ಕ್ರಮವಹಿಸಲಿದೆ ಎಂದ ಅವರು, ಬರಪೀಡಿತ ಪ್ರದೇಶಗಳಿಗೆ ಸರಕಾರ ಮೊದಲ ಹಂತದಲ್ಲಿ 25 ಲಕ್ಷ ರೂ. ನೀಡಿದೆ. ಇತ್ತೀಚೆಗೆ ಎರಡನೇ ಹಂತದಲ್ಲಿ 50 ಲಕ್ಷ ರೂ. ಬಿಡುಗಡೆ ಮಾಡಿದ್ದು, ಬೆಳೆ ನಷ್ಟದ ಪರಿಹಾರಧನವೂ ಶೀಘ್ರ ಬಿಡುಗಡೆಯಾಗಲಿದೆ.
ಸಮ್ಮಿಶ್ರ ಸರಕಾರಕ್ಕೆ ಯಾವುದೇ ಅಪಾಯವಿಲ್ಲ:
ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಸಿಗದಿರುವದಕ್ಕೆ ಬೇಸರ ಇರಬಹುದು. ಆದರೆ ಅವರು ಪಕ್ಷವನ್ನು ತೊರೆದಿಲ್ಲ. ಪಕ್ಷ ತೊರೆದಿರುವ ಬಗ್ಗೆ ಅವರು ಎಲ್ಲೂ ಹೇಳಿಕೆ ನೀಡಿಲ್ಲ. ಸಮ್ಮಿಶ್ರ ಸರಕಾರಕ್ಕೆ ಯಾವ ಅಪಾಯವೂ ಇಲ್ಲ. ಎಲ್ಲವೂ ಊಹಾಪೋಹಗಳಷ್ಟೆ. ಒಂದೇ ಪಕ್ಷದ ಸರಕಾರ ನಡೆಸುವುದೇ ಕಷ್ಟ. ಅಂತದ್ದರಲ್ಲಿ ಸಮ್ಮಿಶ್ರ ಸರಕಾರ ನಡೆಸುವುದು ಇನ್ನೂ ಕಷ್ಟ. ಸರಕಾರದಲ್ಲಿ ಗೊಂದಲಗಳಿರಬಹುದು, ಇದನ್ನು ಸರಿಮಾಡಲು ಎರಡೂ ಪಕ್ಷದ ಮುಖಂಡರು ಸಮರ್ಥರಿದ್ದಾರೆ. ದೇಶದಲ್ಲಿ ಬಿಜೆಪಿ ವಿರೋಧಿ ಅಲೆ ಇದ್ದು, ಭವಿಷ್ಯದಲ್ಲಿ ದೇಶದ ಇತರ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರಕ್ಕೆ ಬರಲಿವೆ.
- ಎನ್.ಎಚ್.ಶಿವಶಂಕರ್ ರೆಡ್ಡಿ, ಕೃಷಿ ಸಚಿವ







