ವಿಧಾನಸಭೆ ಸಚಿವಾಲಯ ಕಾರ್ಯದರ್ಶಿ ಎಸ್.ಮೂರ್ತಿ ಅಮಾನತು

ಬೆಂಗಳೂರು, ಡಿ. 29: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ 2016 ಹಾಗೂ 2017ನೆ ಸಾಲಿನಲ್ಲಿ ನಡೆದ ವಿಧಾನಮಂಡಲ ಚಳಿಗಾಲ ಅಧಿವೇಶನದ ವೇಳೆ ಅವ್ಯವಹಾರ ಆರೋಪದ ಮೇಲೆ ವಿಧಾನಸಭೆ ಸಚಿವಾಲಯ ಕಾರ್ಯದರ್ಶಿ ಎಸ್. ಮೂರ್ತಿ ಅವರನ್ನು ಸಚಿವಾಲಯ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ವಿಧಾನಮಂಡಲ ಅಧಿವೇಶದ ವೇಳೆ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಅಪರ ನಿರ್ದೇಶಕ ಎನ್.ಬಿ.ಶಿವರುದ್ರಪ್ಪ ನೇತೃತ್ವದ ಐದು ಮಂದಿಯ ತಂಡ ಸಲ್ಲಿಸಿದ ವರದಿಯನ್ನು ಆಧರಿಸಿ ವಿಧಾನಸಭೆ ಅಧೀನ ಕಾರ್ಯದರ್ಶಿ ಅಮಾನತು ಆದೇಶ ಹೊರಡಿಸಿದ್ದಾರೆ.
ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ವಿಶೇಷ ತಂಡ ಸಲ್ಲಿಸಿರುವ 40 ಪುಟಗಳ ವರದಿಯನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರು ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರಿಗೆ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.
ದರಪಟ್ಟಿ ಆಹ್ವಾನಿಸದೆ, ತುಲನಾತ್ಮಕ ಪಟ್ಟಿ ತಯಾರಿಸದೆ ದುಬಾರಿ ದರಗಳನ್ನು ನಮೂದಿಸಿ ಸ್ವಚ್ಛತಾ ಸಾಮಗ್ರಿ ಖರೀದಿಸಲಾಗಿದೆ. ಗುತ್ತಿಗೆದಾರರ ಲೆಟರ್‌ಹೆಡ್ ಬಿಲ್ ಪಾವತಿಗೆ ಜಿಎಸ್ಟಿ ನೋಂದಣಿ ಪತ್ರ ಪಡೆಯದೆ 2,02,588 ರೂ.ತೆರಿಗೆ ವಂಚನೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸರಕಾರಿ ಏಜೆನ್ಸಿಗಳ ಎಸ್.ಆರ್. ಮಾರಾಟ ಪಟ್ಟಿ ಹಾಗೂ ಮಾರುಕಟ್ಟೆ ದರಗಳಿಗೆ ಹೋಲಿಸಿದರೆ ಮನಸೋ ಇಚ್ಛೆ ದರಗಳನ್ನು ನಿಗದಿಪಡಿಸಿದ್ದು, ಗುತ್ತಿಗೆದಾರರಿಗೆ ನಿಯಮಬಾಹಿರವಾಗಿ ಬಿಲ್ಲುಗಳನ್ನು ಸ್ವೀಕರಿಸಿ ಹಣ ಸಂದಾಯ ಮಾಡಲಾಗಿದೆ. ಕೆಲವೊಂದು ಸೇವೆಗಳಿಗೆ ಎರಡೆರಡು ಸಲ ಬಿಲ್ ಪಾವತಿ ಮಾಡಲಾಗಿದೆ. ಸಿವಿಲ್ ಸ್ವರೂಪದ ಕಾಮಗಾರಿಗಳನ್ನೂ ಅಗತ್ಯ ಯಾವುದೇ ತಾಂತ್ರಿಕ ಪರಿಣಿತಿ ಹೊಂದಿದ ಅಧಿಕಾರಿಗಳಿಂದ ದೃಢೀಕರಿಸಿಕೊಳ್ಳದಿರುವುದು ಎಸ್.ಮೂರ್ತಿಯವರ ಬೇಜವಾಬ್ದಾರಿತನವನ್ನು ಹಾಗೂ ಕನಿಷ್ಠ ಆಡಳಿತ ಜ್ಞಾನ ಇಲ್ಲದಿರುವುದನ್ನು ಎತ್ತಿ ಹಿಡಿಯುತ್ತದೆ. ಸರಕಾರಿ ಹಣವನ್ನು ವೆಚ್ಚ ಮಾಡುವ ವೇಳೆ ಜಾಗರೂಕತೆ ಹಾಗೂ ವಿವೇಚನೆ ಬಳಸಿಲ್ಲ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ.
2016ರ ಅಧಿವೇಶನಕ್ಕೆ 20 ಕೋಟಿ ರೂ., 2017ರ ಅಧಿವೇಶನಕ್ಕೆ 21.57ಕೋಟಿ ರೂ.ಖರ್ಚು ಮಾಡಿದ್ದು, ಟೆಂಡರ್ ಕರೆಯದೆ ವೆಚ್ಚ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಮಾನತು ಆದೇಶ ಹೊರಡಿಸಲಾಗಿದೆ. ಆದರೆ, ತಾನು ಯಾವುದೇ ಅವ್ಯವಹಾರ ನಡೆಸಿಲ್ಲ ಎಂದು ಎಸ್.ಮೂರ್ತಿ ಸ್ಪಷ್ಟಣೆ ನೀಡಿದ್ದಾರೆ.
ಕಾನೂನು ಚೌಕಟ್ಟಿನಲ್ಲಿ ನಾನು ಕೆಲಸ ಮಾಡಿದ್ದೀನಿ. ಈ ಬಗ್ಗೆ ಹಿಂದಿನ ಸ್ಪೀಕರ್ ಯಾವುದೇ ಆರೋಪ ಮಾಡಿಲ್ಲ. ಈಗಿನ ಸ್ಪೀಕರ್ ಹಾಗೂ ನನ್ನ ನಡುವೆ ಆಡಳಿತಾತ್ಮಕ ವಿರೋಧಾಭಾಸಗಳಿವೆ. ನನ್ನ ಮೇಲಿನ ಆರೋಪದ ಹಿನ್ನೆಲೆಯಲ್ಲಿ ಈ ಬಾರಿ ಟೆಂಡರ್ ಕರೆದು ಮಾಡಬಹುದಿತ್ತು. ಆದರೆ, ಈ ಬಾರಿ ಯಾವುದೇ ಟೆಂಡರ್ ಕರೆಯದೆಯೇ ಹಣ ವೆಚ್ಚ ಮಾಡಲಾಗಿದೆ’
-ಎಸ್.ಮೂರ್ತಿ
ಅವ್ಯವಹಾರ ಆರೋಪದ ಮೇಲೆ ನನ್ನನ್ನು ಅಮಾನತ್ತು ಮಾಡಿರುವ ಹಾಲಿ ಸ್ಪೀಕರ್ ನೇಮಿಸಿರುವ ವಿಶೇಷ ಮಂಡಳಿಯ ತೀರ್ಮಾನವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವೆ. ಅಲ್ಲಿ ನನಗೆ ನ್ಯಾಯ ದೊರೆಯುವ ಬಲವಾದ ನಂಬಿಕೆ ಇದೆ’
-ಎಸ್.ಮೂರ್ತಿ
‘ನನ್ನ ಅವಧಿಯಲ್ಲಿ ಕಾನೂನು ಬಾಹಿರವಾಗಿ ಯಾವುದೇ ವೆಚ್ಚವನ್ನು ಮಾಡಿಲ್ಲ. ಎಲ್ಲವನ್ನೂ ಕಾನೂನುಬದ್ಧವಾಗಿ ಖರ್ಚು ಮಾಡಲಾಗಿದೆ. ಬೆಳಗಾವಿ ವಿಧಾನ ಮಂಡಲ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸಲಾಗಿದೆ. ಈಗ ಯಾವ ಕಾರಣಕ್ಕಾಗಿ ಎಸ್. ಮೂರ್ತಿ ಅವರನ್ನು ಅಮಾನತು ಮಾಡಿದ್ದಾರೋ ಗೊತ್ತಿಲ್ಲ’
-ಕೆ.ಬಿ.ಕೋಳಿವಾಡ, ಮಾಜಿ ಸ್ಪೀಕರ್







