ಪ್ರತಿ ದಿನ ರಕ್ತದಾನ ಮಾಡಿ ವಿಶಿಷ್ಟ ಪ್ರತಿಭಟನೆ ನಡೆಸಲಿರುವ ಇಂಫಾಲ್ ನ 50 ವೈದ್ಯರು

ಇಂಫಾಲ್,ಡಿ.29: ಮಣಿಪುರದ ರಾಜಧಾನಿ ಇಂಫಾಲ್ ನಲ್ಲಿರುವ ಜವಾಹರಲಾಲ್ ಇನ್‍ಸ್ಟಿಟ್ಯೂಟ್ ಆಪ್ ಮೆಡಿಕಲ್ ಸಾಯನ್ಸಸ್ ಇಲ್ಲಿನ ವೈದ್ಯರು ತಮಗೆ ಭಡ್ತಿ ನೀಡದೇ ಇರುವುದನ್ನು ವಿಶಿಷ್ಟವಾಗಿ ಪ್ರತಿಭಟಿಸಲಿದ್ದಾರೆ. ತಮ್ಮ ಬೇಡಿಕೆ ಈಡೇರುವ ತನಕ ಅವರು ಪ್ರತಿ ದಿನ ಮೂರು ಯೂನಿಟ್ ರಕ್ತ ದಾನ ಮಾಡಲು ನಿರ್ಧರಿಸಿದ್ದಾರೆ.
ಆಸ್ಪತ್ರೆಯ ಸುಮಾರು 40 ವೈದ್ಯರು ಸಹಾಯಕ ಪ್ರೊಫೆಸರ್ ಹುದ್ದೆಗೆ ಭಡ್ತಿಗಾಗಿ ಕಾದಿದ್ದಾರೆ. ಸುಮಾರು 50 ವೈದ್ಯರು ಈ ವಿಶಿಷ್ಟ ಪ್ರತಿಭಟನೆಯಲ್ಲಿ ಭಾಗವಹಿಸಲು ಮುಂದೆ ಬಂದಿದ್ದಾರೆ. ತಮ್ಮ ಪ್ರತಿಭಟನೆ ರಕ್ತದ ಅವಶ್ಯಕತೆಯಿರುವ ರೋಗಿಗಳಿಗೂ ಪ್ರಯೋಜನವಾಗಲಿದೆ ಎಂದು ಪ್ರತಿಭಟಿಸಲಿರುವ ವೈದ್ಯರು ಹೇಳಿದ್ದಾರೆ. ರೋಗಿಗಳಿಗೆ ವೈದ್ಯರ ಪ್ರತಿಭಟನೆ ವೇಳೆ ಅನಾನುಕೂಲ ಉಂಟಾಗದಿರಲೆಂದು 77 ವೈದ್ಯರು ಕರ್ತವ್ಯದಲ್ಲಿರಲಿದ್ದು ಉಳಿದವರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಪಿಂಚಣಿ ಯೋಜನೆ ಜಾರಿಗಾಗಿಯೂ ಆಗ್ರಹಿಸುತ್ತಿದ್ಧಾರೆ.
ಪ್ರತಿಭಟನೆ ನಡೆಸಲುದ್ದೇಶಿಸಿರುವ ವೈದ್ಯರು ಸೋಮವಾರ ರಾಜ್ಯ ಆರೋಗ್ಯ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಿ ತಮ್ಮ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಿದ್ದಾರೆ.





