ಜ.8-9ರಂದು ಬಿಸಿಯೂಟ ನೌಕರರಿಂದ ಕೆಲಸ ಸ್ಥಗಿತ
ಮಂಗಳೂರು, ಡಿ.29: ಬಿಸಿಯೂಟ ನೌಕರರು ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಕೇಂದ್ರ ಸರಕಾರ ವೇತನ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜನವರಿ 8 ಮತ್ತು 9 ರಂದು ದ.ಕ. ಜಿಲ್ಲೆಯ ಅಕ್ಷರ ದಾಸೋಹ (ಬಿಸಿಯೂಟ) ನೌಕರರು ಕೆಲಸ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಿಸಿಯೂಟ ನೌಕರರಿಗೆ ಕೇಂದ್ರ ಸರಕಾರ 6,000 ರೂ. ವೇತನ ಏರಿಕೆ ಮಾಡಬೇಕು, ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು. ಕೆಲಸದ ಭದ್ರತೆ ನೀಡಬೇಕೆಂಬ ಹಲವಾರು ಬೇಡಿಕೆಗಳು ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ 12 ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ.
ಕೇಂದ್ರ ಸರಕಾರವು ಕಳೆದ ಯುಪಿಎ ಸರಕಾರ ಭರವಸೆ ನೀಡಿದ 1000 ರೂ. ವೇತನ ಏರಿಕೆಯನ್ನು ನೀಡಿಲ್ಲ. ಶಿಕ್ಷಣ ಇಲಾಖೆಗೆ ಅನುದಾನವನ್ನು ಕೂಡ ಕಡಿತ ಮಾಡಿರುವುದರಿಂದ ಇನ್ನಷ್ಟು ಸಮಸ್ಯೆಗಳು ಉಲ್ಬಣಿಸಿವೆ. ಸ್ಕೀಂ ಕಾರ್ಮಿಕರು ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಪಾರ್ಲಿಮೆಂಟ್ ಚಲೋ ನಡೆಸಿದರೂ ಸ್ಪಂದಿಸಿರುವುದಿಲ್ಲ ಎಂದು ದೂರಲಾಗಿದೆ.
ಸಂಘದ ಉನ್ನತ ಮಟ್ಟದ ನಿಯೋಗವು ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಭೇಟಿಯಾಗಿ ಸಾರ್ವತ್ರಿಕ ಮುಷ್ಕರದ ಬಗ್ಗೆ ಮನವಿ ನೀಡಿ ಮಾತುಕತೆ ನಡೆಸಲಾಯಿತು. ನಿಯೋಗದ ನೇತೃತ್ವವನ್ನು ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗಿರಿಜಾ ಹಾಗೂ ಖಜಾಂಚಿ ಭವ್ಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.