ಸರಕಾರಿ ಅಧಿಕಾರಿಗಳ ಬಳಿ ಚಿತ್ರಮಂದಿರ, ಪೆಟ್ರೋಲ್ ಬಂಕ್ !
5 ಅಧಿಕಾರಿಗಳ ಮೇಲೆ ಎಸಿಬಿ ದಾಳಿ ಪ್ರಕರಣ

ಬೆಂಗಳೂರು, ಡಿ.29: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪದಡಿ ಐವರು ಸರಕಾರಿ ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ 17 ಕಡೆ ಎಸಿಬಿ ದಾಳಿ ಪ್ರಕರಣ ಸಂಬಂಧ ಆಸ್ತಿ ಮೌಲ್ಯ ಬೆಳಕಿಗೆ ಬಂದಿದ್ದು, ಓರ್ವ ಸರಕಾರಿ ಅಧಿಕಾರಿ ಚಿತ್ರಮಂದಿರ, ಮತ್ತೋರ್ವ ಅಧಿಕಾರಿ ಪೆಟ್ರೋಲ್ ಬಂಕ್ ಮಾಲಕನಾಗಿರುವ ದಾಖಲೆ ದೊರೆತಿದೆ.
ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಹೆಚ್ಚುವರಿ ನಿಬಂಧಕ ಆರ್.ಶ್ರೀಧರ್ ಬಳಿ, ಕುಟುಂಬಸ್ಥರ ಹೆಸರಿನಲ್ಲಿ 2 ಮನೆ, 3 ನಿವೇಶನ, 1 ವಾಣಿಜ್ಯ ಸಂಕೀರ್ಣ, 1 ಚಿತ್ರ ಮಂದಿರ, 13 ಗುಂಟೆ ಕೃಷಿ ಭೂಮಿ, 300 ಗ್ರಾಂ ಚಿನ್ನ, 22 ಕೆಜಿ ಬೆಳ್ಳಿ, ಒಂದು ಕಾರು, 1.29 ಲಕ್ಷ ನಗದು ಹಾಗೂ ಎಲ್‌ಐಸಿ ಪಾಲಿಸಿ ಠೇವಣಿಗಳು 2.5 ಲಕ್ಷ, 7.34 ಲಕ್ಷ ಗೃಹೋಪಯೋಗಿ ವಸ್ತುಗಳು ಹಾಗೂ 1 ಲಾಕರ್ ಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.
ಅದೇ ರೀತಿ, ದಾವಣಗೆರೆಯ ಕೃಷಿ ಇಲಾಖೆ ಉಪನಿರ್ದೇಶಕಿ ಹಂಸವೇಣಿ ಅವರ ಕುಟುಂಬಸ್ಥರ ಹೆಸರಿನಲ್ಲಿ 1 ಮನೆ, 11.32 ಎಕರೆ ಜಮೀನು, 1.56 ಕೆಜಿ ಚಿನ್ನ, 2.200 ಗ್ರಾಂ ಕೆಜಿ ಬೆಳ್ಳಿ, 1 ಜೀಪ್, 1 ಟ್ರ್ಯಾಕ್ಟರ್, 4 ಬೈಕ್, 1.5 ಲಕ್ಷ ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿ 2 ಲಕ್ಷ ಠೇವಣಿ, 5 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಮಂಗಳೂರು ಸರಕಾರಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯ ಪ್ರವಾಚಕ ಡಿ. ಮಂಜುನಾಥ್ ಅವರ ಹೆಸರಿನಲ್ಲಿ 1 ಮನೆ, 1 ನಿವೇಶನ, 443 ಗ್ರಾಂ ಚಿನ್ನ, ಬೆಳ್ಳಿ 983 ಗ್ರಾಂ ಬೆಳ್ಳಿ, 2 ಕಾರು, 1 ಬೈಕ್, 1.5 ಲಕ್ಷ ನಗದು ಹಾಗೂ ವಿವಿಧ ಬ್ಯಾಂಕಗಳಲ್ಲಿ 10.5 ಲಕ್ಷ, 5 ಲಕ್ಷ ಗೃಹ ಬಳಕೆ ವಸ್ತುಗಳು ಕಂಡು ಬಂದಿದೆ.
ಬಿಬಿಎಂಪಿಯ ನಗರ ಯೋಜನೆ ಸಹಾಯ ನಿರ್ದೇಶಕ ಕೆ.ಬಸೆಟಪ್ಪ ಅವರ ಕುಟುಂಬಸ್ಥರ ಹೆಸರಿನಲ್ಲಿ 2 ಮನೆ, 1 ನಿವೇಶನ, 1 ವಾಣಿಜ್ಯ ಸಂಕೀರ್ಣ, 250 ಗ್ರಾಂ ಚಿನ್ನ, 10 ಕೆಜಿ ಬೆಳ್ಳಿ, 1 ಕಾರು, 18 ಲಕ್ಷ ಗೃಹೋಪಯೋಗಿ ವಸ್ತುಗಳು, 2 ಲಾಕರ್‌ಗಳು ಪತ್ತೆಯಾಗಿದ್ದು ಶೋಧನೆ ಕಾರ್ಯ ಮುಂದುವರೆದಿದ್ದು, ಬೇರೆಯವರ ಹೆಸರಿನಲ್ಲಿ 37 ಲಕ್ಷ ಚಿನ್ನ ಖರೀದಿಸಿದ ರಶೀದಿ ಪತ್ತೆಯಾಗಿವೆ.
ಮೈಸೂರಿನ ಮೂಡಾ ಕಿರಿಯ ಅಭಿಯಂತರ ಕೆ.ಮಣಿ ಅವರ ಕುಟುಂಬಸ್ಥರ ಹೆಸರಿನಲ್ಲಿ 2 ಮನೆ, 2 ನಿವೇಶನ, 1 ಪೆಟ್ರೋಲ್ ಪಂಪ್, 1 ಎಕರೆ ಜಮೀನು, 378 ಗ್ರಾಂ ಚಿನ್ನ, 433 ಗ್ರಾಂ ಬೆಳ್ಳಿ, 1 ಕಾರು, 4 ಬೈಕ್ , 2.35 ಲಕ್ಷ ಎಲ್‌ಐಸಿ ಬಾಂಡ್ ಹಾಗೂ 12.33 ಲಕ್ಷ ಗೃಹೋಪಯೋಗಿ ವಸ್ತುಗಳು ಕಂಡು ಬಂದಿದೆ. ಸರಕಾರಿ ಅಧಿಕಾರಿಗಳು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ಈಗಾಗಲೇ ದೊರೆತಿರುವ ದಾಖಲೆಗಳ ಪರಿಶೀಲನಾ ಕಾರ್ಯ ಮುಂದುವರೆದಿದ್ದು, ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಎಸಿಬಿ ತಿಳಿಸಿದೆ.







