ದಿಲ್ಲಿ ಆಶ್ರಯ ಧಾಮದಲ್ಲಿ ಸಿಬ್ಬಂದಿಯಿಂದಲೇ ಬಾಲಕಿಯರಿಗೆ ಲೈಂಗಿಕ ಕಿರುಕುಳ
ಹೊಸದಿಲ್ಲಿ, ಡಿ. 29: ದಿಲ್ಲಿಯ ಬಾಲಕಿಯರ ಆಶ್ರಯಧಾಮದಲ್ಲಿ ಸಿಬ್ಬಂದಿಯೇ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ದಿಲ್ಲಿಯ ಮಹಿಳಾ ಆಯೋಗ (ಡಿಸಿಡಬ್ಲು) ಶುಕ್ರವಾರ ಹೇಳಿದೆ.
ದಿಲ್ಲಿ ಆಶ್ರಯ ಧಾಮದಲ್ಲಿ ಗುರುವಾರ ಪರಿಶೀಲನೆ ಸಂದರ್ಭ ಆಶ್ರಯ ಧಾಮದಲ್ಲಿ ವಾಸಿಸುವ ಅನುಭವವನ್ನು ತಿಳಿದುಕೊಳ್ಳಲು 6-15 ವರ್ಷದ ಬಾಲಕಿಯರೊಂದಿಗೆ ದಿಲ್ಲಿ ಮಹಿಳಾ ಆಯೋಗದ ಸದಸ್ಯೆಯರು ಸಂವಹನ ನಡೆಸಿದ್ದಾರೆ ಎಂದು ಡಿಸಿಡಬ್ಲು ಹೇಳಿಕೆ ತಿಳಿಸಿದೆ. ಮಹಿಳಾ ಸಿಬ್ಬಂದಿ ಶಿಕ್ಷೆಯ ಹೆಸರಿನಲ್ಲಿ ನಮ್ಮ ಖಾಸಗಿ ಭಾಗಗಳಿಗೆ ಮೆಣಸಿನ ಹುಡಿ ಹಾಕುತ್ತಿದ್ದರು ಎಂದು ದಿಲ್ಲಿಯ ಆಶ್ರಯಧಾಮ ‘ದ್ವಾರಕ’ದ ಕೆಲವು ಹಿರಿಯ ಬಾಲಕಿಯರು ಆರೋಪಿಸಿದ್ದಾರೆ.
ಮೆಣಸಿನ ಹುಡಿ ತಿನ್ನುವಂತೆ ಕೂಡ ಅವರು ಬಲವಂತ ಮಾಡುತ್ತಿದ್ದರು ಎಂದು ಬಾಲಕಿಯರು ತಿಳಿಸಿದ್ದಾರೆ. ಆಶ್ರಯಧಾಮದಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲದೇ ಇರುವುದರಿಂದ ಬಾಲಕಿಯರಲ್ಲಿ ಪಾತ್ರೆ, ಬಟ್ಟೆಬರೆ ಒಗೆಯುವಂತೆ, ಕೊಠಡಿ, ಶೌಚಾಲಯ ಸ್ವಚ್ಛಗೊಳಿಸುವಂತೆ ಹಾಗೂ ಅಡುಗೆ ಮಾಡುವಂತೆ ಒತ್ತಾಯ ಮಾಡುತ್ತಿದ್ದರು. 22 ಮಂದಿ ಬಾಲಕಿಯರು ಇರುವ ಈ ಆಶ್ರಯ ಧಾಮಕ್ಕೆ ಕೇವಲ ಓರ್ವ ಅಡುಗೆ ಮಾಡುವವ ಇದ್ದಾನೆ. ಆಹಾರದ ಗುಣಮಟ್ಟ ಉತ್ತಮವಾಗಿಲ್ಲ ಎಂದು ಹೇಳಿಕೆ ತಿಳಿಸಿದೆ.