ಹಾಸನ ಕ್ಷೇತ್ರ ಪ್ರಜ್ವಲ್ ರೇವಣ್ಣನಿಗೆ ಬಿಟ್ಟುಕೊಡುವೆ: ಮಾಜಿ ಪ್ರಧಾನಿ ದೇವೇಗೌಡ
ಲೋಕಸಭಾ ಚುನಾವಣೆ

ಬೆಂಗಳೂರು, ಡಿ. 29: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಡುತ್ತೇನೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಶನಿವಾರ ಜೆಡಿಎಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಎಂಟು ವರ್ಷಗಳಿಂದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲಿ ತೊಡಗಿದ್ದು, ಮುಂದಿನ ಚುನಾವಣೆಯಲ್ಲಿ ಕ್ಷೇತ್ರವನ್ನು ಅವರಿಗೆ ಬಿಟ್ಟುಕೊಡುವೆ ಎಂದರು.
2019ರ ಲೋಕಸಭಾ ಚುನಾವಣೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸೀಟು ಹಂಚಿಕೆ ಪ್ರಕ್ರಿಯೆ ಬಗ್ಗೆ ಚರ್ಚೆಯಾಗಬೇಕಿದೆ. ಯಾವ ಸೀಟು ಯಾರಿಗೆ ಎಂಬುದು ಇನ್ನೂ ಗೊತ್ತಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮಾರ್ಚ್ ಮೊದಲ ವಾರ ಏಳೆಂಟು ಜಿಲ್ಲೆಗಳಿಗೆ ನಾವು ಪ್ರವಾಸ ಮಾಡುತ್ತೇವೆ ಎಂದು ದೇವೇಗೌಡ ಹೇಳಿದರು.
ರಾಜ್ಯದಲ್ಲಿ ಮೈತ್ರಿ ಸರಕಾರ ಮಾಡಿದ್ದೇವೆ ಎಂದು ಯಾರಿಗೂ ಸಲಿಗೆ ನೀಡಲ್ಲ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಉಳಿವು ಮುಖ್ಯವಾಗಿದ್ದು, ಚರ್ಚೆ ಮೂಲಕ ಸಮಸ್ಯೆ ಬಗೆಹರಿಸಿ, ಎಲ್ಲ ಊಹಾ-ಪೋಹಗಳಿಗೆ ತೆರೆ ಎಳೆಯಬೇಕಿದೆ ಎಂದು ದೇವೇಗೌಡ ನುಡಿದರು.
ನಿಗಮ ಮಂಡಳಿ ಅಧ್ಯಕ್ಷರ ನೇಮಕ ಸಂಬಂಧ ಇನ್ನು ಅಂತಿಮವಾಗಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಚರ್ಚೆ ನಡೆಸಿ, ನಂತರ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡಬೇಕಿದೆ. ಈ ಬಗ್ಗೆ ಚರ್ಚಿಸಲು ಜ.3ಕ್ಕೆ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳ ಸಭೆ ಕರೆದಿದ್ದೇವೆ ಎಂದರು.
ಚರ್ಚೆ ಬೇಡ: ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕ ಸಂಬಂಧ ಸುಪ್ರೀಂ ಕೋರ್ಟ್ ಮಾರ್ಗಸೂತ್ರವಿದ್ದು, ನ್ಯಾಯಾಲಯದ ನಿಯಮಗಳನ್ನು ಉಲ್ಲಂಘಿಸಿ ನೇಮಕ ಮಾಡಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಅನಗತ್ಯ ಚರ್ಚೆ ಬೇಡ ಎಂದು ದೇವೇಗೌಡ ಇದೇ ವೇಳೆ ಸ್ಪಷ್ಟಪಡಿಸಿದರು.
‘ರಾಜ್ಯ ಸರಕಾರ ರೈತರ ಸಾಲಮನ್ನಾ ಮಾಡುವ ವಿಚಾರಕ್ಕೆ ಬದ್ಧವಾಗಿದ್ದು, ಸಾಲಮನ್ನಾ ಬಗ್ಗೆ ಅನುಮಾನ ಬೇಡ. ಸಹಕಾರಿ ಬ್ಯಾಂಕ್ ಸಾಲಮನ್ನಾ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಬಗ್ಗೆಯೂ ಸಂಶಯ ಬೇಡ’
-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ







