ಅಖಿಲ ಭಾರತ ಅಂತರ ವಿವಿ ಮಹಿಳಾ ಟೆನಿಸ್: ಎಚ್‌ಎನ್ ಗುಜರಾತ್ ವಿವಿಗೆ ಚಾಂಪಿಯನ್ ಪ್ರಶಸ್ತಿ

ಉಡುಪಿ, ಡಿ.29: ಗುಜರಾತ್‌ನ ಪಠಾನ್‌ನ ಎಚ್‌ಎನ್ ಗುಜರಾತ್ ವಿವಿ ಮಣಿಪಾಲ ಮಾಹೆ ವಿವಿ ಆಶ್ರಯದಲ್ಲಿ ಮಣಿಪಾಲದ ಮರೆನಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಇಂದು ಮುಕ್ತಾಯಗೊಂಡ ಅಖಿಲ ಭಾರತ ಅಂತರ ವಿವಿ ಮಹಿಳಾ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಮರೆನಾ ಕಾಂಪ್ಲೆಕ್ಸ್‌ನ ಟೆನಿಸ್ ಕೋರ್ಟ್‌ಗಳಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಎಚ್‌ಎನ್ ಗುಜರಾತ್ ವಿವಿ ತಂಡ, ಹೈದರಾಬಾದ್‌ನ ಉಸ್ಮಾನಿಯಾ ವಿವಿಯನ್ನು 2-1 ಅಂತರದಿಂದ ಪರಾಭವಗೊಳಿಸಿತು. ಉಸ್ಮಾನಿಯಾ ವಿವಿ ರನ್ನರ್ ಅಫ್ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಗುಜರಾತ್ ವಿವಿ, ಚಂಡೀಗಢದ ಪಂಜಾಬ್ ವಿವಿಯನ್ನು 2-1ರ ಅಂತರದಿಂದ ಮಣಿಸಿ ಮೂರನೇ ಸ್ಥಾನಿಯಾಯಿತು.
ನಿಕಟ ಹೋರಾಟ ಕಂಡುಬಂದ ಫೈನಲ್‌ನಲ್ಲಿ ಎಚ್‌ಎನ್ ಗುಜರಾತ್‌ನ ವೈದೇಹಿ, ಉಸ್ಮಾನಿಯಾ ವಿವಿಯ ಶ್ರಾವ್ಯರನ್ನು 2-1 ಸೆಟ್‌ಗಳ ಅಂತರದಿಂದ ಸೋಲಿಸಿ ತಂಡಕ್ಕೆ 1-0 ಮುನ್ನಡೆ ನೀಡಿದರು. ಆದರೆ ಎರಡನೇ ಸಿಂಗಲ್ಸ್‌ನಲ್ಲಿ ಉಸ್ಮಾನಿಯಾದ ವಿವಿಯ ಟಿ.ಶ್ರೇಯಾ ಅವರು ಗುಜರಾತ್‌ನ ರುತ್ವಿ ಅವರನ್ನು ಸೋಲಿಸಿ ತಂಡವನ್ನು 1-1ರ ಸಮಬಲಕ್ಕೆ ತಂದರು.
ಮೂರನೇ ನಿರ್ಣಾಯಕ ಡಬಲ್ಸ್‌ನಲ್ಲಿ ಎಚ್‌ಎನ್ ಗುಜರಾತ್ ವಿವಿಯ ವೈದೇಹಿ ಹಾಗೂ ರುತ್ವಿ ಅವರು ಉಸ್ಮಾನಿಯಾದ ಶ್ರಾವ್ಯ ಶಿವಾನಿ ಹಾಗೂ ಟಿ.ಶ್ರೇಯಾರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ತಂಡಕ್ಕೆ ಚಾಂಪಿಯನ್ ಪ್ರಶಸ್ತಿ ಒಲಿಯುವಂತೆ ಮಾಡಿದರು.
ಗುಜರಾತ್ ವಿವಿ- ಪಂಜಾಬ್ ವಿವಿ ಪಂದ್ಯದಲ್ಲಿ ಗುಜರಾತ್ ವಿವಿಯ ದೀಪಶಿಖಾ ಮತ್ತು ಉರ್ಮಿ ಪಾಂಡೆ ಅವರು ತಮ್ಮ ಎದುರಾಳಿಗಳಾದ ಪ್ರಕನತಿ ಹಾಗೂ ಹಿಮಾನ್‌ಶಿಖಾರನ್ನು ಸಿಂಗಲ್ಸ್‌ಗಳಲ್ಲಿ ಸೋಲಿಸಿ ತಂಡಕ್ಕೆ 2-0 ಜಯ ದೊರಕಿಸಿಕೊಟ್ಟರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾವಹಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್, ಸಿಂಡಿಕೇಟ್ ಬ್ಯಾಂಕಿನ ಜಿಎಂ ಭಾಸ್ಕರ ಹಂದೆ ಅವರು ವಿಜೇತರಿಗೆ ಟ್ರೋಫಿ ಹಾಗೂ ಬಹುಮಾನಗಳನ್ನು ವಿತರಿಸಿದರು. ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ಉಪಸ್ಥಿತರಿದ್ದರು.