ಜ.7ರೊಳಗೆ ಭಡ್ತಿ ಮೀಸಲಾತಿ ಕಾಯ್ದೆ ಜಾರಿಯಾಗದಿದ್ದರೆ ಹೋರಾಟ: ಡಿ.ಶಿವಶಂಕರ್
ಬೆಂಗಳೂರು, ಡಿ.29: ರಾಜ್ಯದ ಎಸ್ಸಿ-ಎಸ್ಟಿ ಸರಕಾರಿ ನೌಕರರಿಗೆ ಭಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಕಾಯ್ದೆಯನ್ನು ಸರಕಾರವು ಜ.7ರೊಳಗೆ ಜಾರಿ ಮಾಡದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ್ಷ ಡಿ.ಶಿವಶಂಕರ್ ತಿಳಿಸಿದರು.
ಶನಿವಾರ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿಸಿದ ಸಮಾಲೋಚನಾ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಯ್ದೆಯನ್ನು ಅನುಷ್ಠಾನ ಮಾಡಲು ಯಾವುದೇ ಕಾನೂನು ತೊಡಕು ಇಲ್ಲ ಎಂದು ರಾಜ್ಯ ಸರಕಾರದ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುತ್ತಿರುವ ನ್ಯಾಯವಾದಿ ಬಸವಪ್ರಭು ಪಾಟೀಲ್ ಹೇಳಿದ್ದಾರೆ. ಸರಕಾರ ಈ ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಅವರು ಹೇಳಿದರು.
ಇದು ನಮ್ಮ ಅಂತಿಮ ಹೋರಾಟ. ಇಲ್ಲಿಗೆ ಬರುವುದು ಮನವಿ ಕೊಡುವುದು, ಹೋಗುವುದು ಎಲ್ಲ ಇಲ್ಲಿಗೆ ಮುಕ್ತಾಯ. ಸರಕಾರಿ ನೌಕರರಾಗಿ ಸರಕಾರವನ್ನು ನಂಬುವುದು ನಮ್ಮ ಕರ್ತವ್ಯ. ಇವತ್ತಿನ ಸಭೆ ಸಕಾರಾತ್ಮಕ ಹಾಗೂ ಅರ್ಥಪೂರ್ಣವಾಗಿ ನಡೆದಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಏನು ಪರಿಹಾರ ಎಂಬುದರ ಕುರಿತು ಗಂಭೀರವಾಗಿ ಚರ್ಚೆಯಾಗಿದೆ ಎಂದು ಶಿವಶಂಕರ್ ತಿಳಿಸಿದರು.
ಮಾಜಿ ಅಟಾರ್ನಿ ಜನರಲ್, ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ಅಭಿಪ್ರಾಯ ಸಂಗ್ರಹಿಸಿ ಮುಂದುವರೆಯುವಂತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ. ಜ.7ರೊಳಗೆ ಕಾಯ್ದೆ ಜಾರಿಯಾಗಲಿದೆ ಎಂಬ ಆಶಾಭಾವನೆಯನ್ನು ನಾವು ಇಟ್ಟುಕೊಂಡಿದ್ದೇವೆ ಎಂದು ಅವರು ಹೇಳಿದರು.
ಹಿಂಭಡ್ತಿ ಮಾಡಿ ಹೊರಡಿಸಿರುವ ಆದೇಶಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಸಭೆಯಲ್ಲಿ ಬೇಡಿಕೆ ಮಂಡಿಸಲಾಗಿದ್ದು, ಸರಕಾರ ಸಹಮತ ವ್ಯಕ್ತಪಡಿಸಿದೆ. ಆಕಸ್ಮಿಕವಾಗಿ ಸರಕಾರ ಈ ಕಾಯ್ದೆಯನ್ನು ಅನುಷ್ಠಾನ ಮಾಡುವಲ್ಲಿ ವಿಳಂಬ ಮಾಡಿದರೆ, ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಶಿವಶಂಕರ್ ಎಚ್ಚರಿಕೆ ನೀಡಿದರು.
ಕಾಯ್ದೆ ಅನುಷ್ಠಾನದ ಪ್ರಕ್ರಿಯೆಗಳನ್ನು ಇಂದಿನಿಂದಲೇ ಆರಂಭಿಸುವಂತೆ ಉಪಮುಖ್ಯಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ. ಅಡ್ವೋಕೇಟ್ ಜನರಲ್ ಕೂಡ ಕಾಯ್ದೆ ಜಾರಿ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವು ದಿನದ 24 ಗಂಟೆಯೂ ಕಾವಲು ನಾಯಿಗಳ ರೀತಿ ಇದ್ದರೆ ಮಾತ್ರ ಈ ಸಮಾಜದಲ್ಲಿ, ಸರಕಾರದಲ್ಲಿ ಬದುಕಲು ಸಾಧ್ಯ ಎಂದು ಅವರು ಹೇಳಿದರು.
ನಾವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಂಘಟಿತರಾಗಬೇಕಾದ ಅನಿವಾರ್ಯತೆಯಿದೆ. ಕಾನೂನಾತ್ಮಕವಾಗಿ ನಾವು ಹೋರಾಟ ಮಾಡುತ್ತಿರಬಹುದು. ಕೊನೆಯದಾಗಿ ಇದೇ ನೌಕರರು ಒಂದು ದಿನ ರಾಜಕೀಯ ಹೋರಾಟವನ್ನು ಮಾಡಬೇಕಾಗುತ್ತದೆ. ಚಿನ್ನದ ಕತ್ತಿ ಎಂದು ಕತ್ತು ಕೊಯ್ಯಿಸಿಕೊಳ್ಳುವಂತಿಲ್ಲ. ಯಾರನ್ನೋ ನಂಬಿ ನಾವು ಮನೆಯಲ್ಲಿ ಹೋಗಿ ಕೂರುವಂತಿಲ್ಲ ಎಂದು ಶಿವಶಂಕರ್ ಹೇಳಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ವಿಜಯಕುಮಾರ್, ಕಾನೂನು ಸಲಹೆಗಾರ ಚಂದ್ರಶೇಖರಯ್ಯ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.







