ಕುವೆಂಪುಗೆ ಭಾರತರತ್ನ ಪ್ರಶಸ್ತಿ ನೀಡಲು ಆಗ್ರಹ

ಬೆಂಗಳೂರು, ಡಿ. 29: ಕನ್ನಡದ ಮೇರುಕವಿ, ದಾರ್ಶನಿಕ, ಯುಗಪ್ರವರ್ತಕ ರಾಷ್ಟ್ರಕವಿ ಕುವೆಂಪು ಅವರಿಗೆ ರಾಷ್ಟ್ರದ ಅತ್ಯುನ್ನತ ಗೌರವವಾದ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಡಾ. ಕೋ.ವೆಂ. ರಾಮಕೃಷ್ಣೇಗೌಡ ಆಗ್ರಹಿಸಿದ್ದಾರೆ.
ಶನಿವಾರ ಲಾಲ್‌ಬಾಗ್ ಪಶ್ಚಿಮ ದ್ವಾರದಲ್ಲಿನ ಕುವೆಂಪು ಪ್ರತಿಮೆ ಬಳಿ ಆಯೋಜಿಸಿದ್ದ ಅವರ 115ನೆ ಹುಟ್ಟುಹಬ್ಬದಲ್ಲಿ ಆಶಯ ಭಾಷಣ ಮಾಡಿದ ಅವರು, ರಾಜ್ಯವನ್ನಾಳಿದ ಎಲ್ಲ ಸರಕಾರಗಳೂ ಕುವೆಂಪು ಅವರಿಗೆ ಅನ್ಯಾಯ ಮಾಡುತ್ತಲೇ ಬಂದಿವೆ. ಸಿಎಂ ಕುಮಾರಸ್ವಾಮಿ ಅವರಾದರೂ ದಿಟ್ಟ ನಿರ್ಧಾರ ತೆಗೆದುಕೊಂಡು ಕುವೆಂಪು ಅವರಿಗೆ ಭಾರತರತ್ನ ಪ್ರಶಸ್ತಿ ಬರುವಂತೆ ಶ್ರಮಿಸಬೇಕು ಎಂದರು.
ಉದ್ಘಾಟನೆ ನೆರವೇರಿಸಿದ ಸಾಹಿತಿ ಡಾ.ನಲ್ಲೂರು ಪ್ರಸಾದ್, ಕುವೆಂಪು ನಮಗೆ ದೇವರಂತೆ ಕಾಣುತ್ತಿದ್ದರು. ಮೈಸೂರಿನಲ್ಲಿ ಎಂ.ಎ. ಓದುತ್ತಿದ್ದಾಗ ಅವರನ್ನು ಮಾತನಾಡಿಸಲು ನಮಗೆ ದಿಗಿಲಾಗುತ್ತಿತ್ತು. ಮರೆಯಲ್ಲಿ ನಿಂತು ಅವರನ್ನು ನೋಡಿ ನಾವು ದೇವರನ್ನು ನೋಡಿದಷ್ಟೇ ಧನ್ಯತಾ ಭಾವ ಹೊಂದುತ್ತಿದ್ದೆವು ಎಂದು ನೆನಪು ಮಾಡಿಕೊಂಡರು.
ಕುವೆಂಪು ಕೇವಲ ಸಾಹಿತ್ಯ ಕೃಷಿ ಮಾಡಿದ್ದಾರೆಂಬ ಕಾರಣಕ್ಕೆ ನಾವು ಅವರನ್ನು ನೆನಪಿಸಿಕೊಳ್ಳಬೇಕಾಗಿಲ್ಲ. ಅವರು ಬಿತ್ತಿರುವ ವೈಚಾರಿಕತೆ, ತೋರಿದ ರಾಜಮಾರ್ಗ, ಎಲ್ಲರಲ್ಲೂ ಮಾನವೀಯ ಅನುಕಂಪವನ್ನು ಹುಡುಕಿದ ಬಗೆ, ಸಾಮಾನ್ಯನನ್ನೂ ಶ್ರೀ ಎಂದು ಸಂಬೋಧಿಸಿದ ಪರಿ, ಸರ್ವ ಜನಾಂಗದ ಬಗೆಗಿದ್ದ ಕಳಕಳಿ, ಕನ್ನಡ ನಾಡು ನುಡಿಯ ಬಗೆಗೆ ಪ್ರಕಟಪಡಿಸಿದ ಅಭಿಮಾನಕ್ಕಾಗಿ ಅವರನ್ನು ಕನ್ನಡಿಗರು ಮತ್ತೆಮತ್ತೆ ನೆನಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ, ರಾಜ್ಯ ಸರಕಾರವೇ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭ ಮಾಡಲು ಮುಂದಾಗಿರುವುದು ಮೂರ್ಖತನದ ನಿರ್ಧಾರವಾಗಿದ್ದು ಇಂಥ ತೀರ್ಮಾನವನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ರಾಜ್ಯ ಸರಕಾರದ ಈ ನಡೆ ಕುವೆಂಪು ಅವರ ಚಿಂತನೆಗೆ ವಿರುದ್ಧವಾಗಿದ್ದು ಕುವೆಂಪು ಅವರಿಗೆ ಇದರಿಂದ ಅಗೌರವ ತೋರಿದಂತಾಗಿದೆ ಎಂದರು. ಈ ವೇಳೆ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ಪಾಲಿಕೆ ಸದಸ್ಯೆ ವಾಣಿರಾವ್, ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಗಾಯತ್ರಿ ರಾಮಣ್ಣ, ಆನಂದ ಮಾದಲಗೆರೆ, ಆರ್.ನೀಲಾಂಬಿಕೆ ಹಾಜರಿದ್ದರು.







