ದೇರಳಕಟ್ಟೆಯಲ್ಲಿ ಹಲ್ಲೆ ಪ್ರಕರಣ: ಮತ್ತಿಬ್ಬರು ಆರೋಪಿಗಳು ಸೆರೆ
ಉಳ್ಳಾಲ, ಡಿ. 29: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಯನೆಪೊಯ ಆಸ್ಪತ್ರೆ ಬಳಿ ಸ್ಟೂಡೆಂಟ್ ಹೌಸ್ ಕಟ್ಟಡದ ಕೊಠಡಿಗೆ ನುಗ್ಗಿ ಲೆನಿನ್ ಮತ್ತು ಪ್ರಕಾಶ್ ಮೇಲೆ ಹಲ್ಲೆ ಮಾಡಿ ಮೊಬೈಲ್ ಫೋನ್ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂಥೆ ಮತ್ತಿಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಉಳ್ಳಾಲ ಠಾಣೆಗೆ ಹಸ್ತಾಂತರಿಸಿದ್ದಾರೆ.
ಘಟನೆಯ ವಿವರ
ಕಳೆದ ರವಿವಾರ ದೇರಳಕಟ್ಟೆಯ ಆಸ್ಪತ್ರೆ ಬಳಿ ಇರುವ ಸ್ಟೂಡೆಂಟ್ ಹೌಸ್ ಬಳಿ ಲೆನಿನ್ ಮತ್ತು ಅವರ ಸ್ನೇಹಿತರಾದ ಪ್ರಕಾಶ್ ಜತೆಯಲ್ಲಿದ್ದ ಸಂದರ್ಭ ಲುಕ್ಮಾನ್ ಮತ್ತು ಅಕ್ಬರ್ ಸೇರಿದಂತೆ ಇನ್ನಿಬ್ಬರು ಯುವಕರು ಅವರ ಮೇಲೆ ಹಲ್ಲೆ ನಡೆಸಿ ಅವರ ಕೈಯಲ್ಲಿದ್ದ ಮೊಬೈಲ್, ಸಿಮ್ ಮತ್ತು ಪ್ರಕಾಶ್‍ರವರ 10 ಸಾವಿರ ರೂ ಮೌಲ್ಯದ ಮೊಬೈಲ್ ದೋಚಿ ಪರಾರಿಯಾಗಿದ್ದರು ಎಂದು ದೂರಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಅದೇ ದಿನ ಲುಕ್ಮಾನ್‍ನನ್ನು ಬಂಧಿಸಲಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು ಶಾಂತಿಬಾಗ್ ನಿವಾಸಿ ಮೊಹಮ್ಮದ್ ಅಕ್ಬರ್(22) ಮತ್ತು ಮೊಹಮ್ಮದ್ ಮುಸಾವಿರ್ (23) ಎಂಬವರನ್ನು ಬಂಧಿಸಿದ್ದಾರೆ.