ಲೈಂಗಿಕ ಕಿರುಕುಳ: ಸಚಿವಾಲಯಗಳು ಸ್ವೀಕರಿಸಿದ 141 ದೂರುಗಳಲ್ಲಿ 45 ವಿಲೇವಾರಿ
ಹೊಸದಿಲ್ಲಿ, ಡಿ. 29: 2017ರಿಂದ ಇದುವರೆಗೆ ಸಲ್ಲಿಸಲಾದ ಲೈಂಗಿಕ ಕಿರುಕುಳದ 141 ದೂರುಗಳಲ್ಲಿ 45 ದೂರುಗಳನ್ನು ಕೇಂದ್ರ ಸರಕಾರದ ಸಚಿವಾಲಯಗಳು ವಿಲೇವಾರಿ ಮಾಡಿದೆ ಎಂದು ಕೇಂದ್ರ ಸರಕಾರ ಶುಕ್ರವಾರ ರಾಜ್ಯಸಭೆಗೆ ತಿಳಿಸಿತು.
ಹಣಕಾಸು ಸಚಿವಾಲಯ ಅತ್ಯಧಿಕ ಅಂದರೆ 21 ದೂರುಗಳನ್ನು ಸ್ವೀಕರಿಸಿದೆ ಎಂದು ಮಹಿಳೆ ಮತ್ತು ಮಕ್ಕಳ ಅಬಿವೃದ್ಧಿ ಖಾತೆ ಸಚಿವ ವಿರೇಂದ್ರ ಕುಮಾರ್ ಹೇಳಿದ್ದಾರೆ. ಸಂವಹನ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯ ತಲಾ 16 ದೂರುಗಳನ್ನು ಸ್ವೀಕರಿಸಿದೆ. ರೈಲ್ವೆ ಸಚಿವಾಲಯ 14 ದೂರುಗಳು, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ 12 ದೂರುಗಳನ್ನು ಸ್ವೀಕರಿಸಿದೆ. ಇದೇ ಅವಧಿಯಲ್ಲಿ ಖಾಸಗಿ ವಲಯ ಸ್ವೀಕರಿಸಿದ 169 ದೂರುಗಳಲ್ಲಿ 29 ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಲೈಂಗಿಕ ಕಿರುಕುಳ ಹಾಗೂ ಲಭ್ಯವಿರುವ ಕಾನೂನು ಅವಕಾಶಗಳ ಬಗ್ಗೆ ಕಾರ್ಯಾಗಾರ ಹಾಗೂ ಜಾಗೃತಿ ಕಾರ್ಯಕ್ರಮ ಏರ್ಪಡಿಸುವಂತೆ ಸಚಿವಾಲಯಗಳು ಮನವಿ ಮಾಡಿವೆ.
ಖಾಸಗಿ ವಲಯದ ಸಂಸ್ಥೆಗಳು, ಉದ್ಯಮ ಸಂಸ್ಥೆಗಳು ಹಾಗೂ ಕೈಗಾರಿಕೆಗಳಲ್ಲಿ ಇದೇ ರೀತಿಯ ಕಾರ್ಯಾಗಾರ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆಗಳ ಕಾರ್ಯದರ್ಶಿಗಳಿಗೆ ಸಲಹೆ ನೀಡಬೇಕು ಎಂದು ಎಲ್ಲ ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತದಲ್ಲಿ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜಾಹೀರಾತು, ತಮಿಳು-ಹಿಂದಿ ಚಿತ್ರರಂಗ, ಕಲೆ, ಸಂಗೀತ, ನೃತ್ಯ, ಪ್ರಕಟನೆ, ಪತ್ರಿಕೋದ್ಯಮ, ಕ್ರೀಡೆ, ಧರ್ಮ ಹಾಗೂ ಲಾಭ ರಹಿತ ಸಂಘಟನೆಗಳಂತಹ ಹಲವು ವಲಯದಾದ್ಯಂತ ಲೈಂಗಿಕ ಕಿರುಕುಳ ಹಾಗೂ ದುರ್ನಡತೆ ಬಗ್ಗೆ ಅಕ್ಟೋಬರ್ 5ರ ಬಳಿಕ 12ಕ್ಕೂ ಅಧಿಕ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ವಿವರವಾಗಿ ಬರೆದಿದ್ದಾರೆ.







