ಇಂಧಿರಾಗಾಂಧಿಯನ್ನು ಪ್ರಧಾನಿ ಮಾಡುವಲ್ಲಿ ಕಾಮರಾಜ್ ಪಾತ್ರ ಅಪಾರ: ಎಚ್.ಡಿ.ದೇವೇಗೌಡ

ಬೆಂಗಳೂರು, ಡಿ.29: ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದ ಸಂದರ್ಭದಲ್ಲಿ ಇಂದಿರಾಗಾಂಧಿಯನ್ನು ಪ್ರಧಾನಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಮರಾಜ್ ಅವರು ದೇಶಕ್ಕೆ ತುರ್ತು ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಯಾಕಾದರೂ ಇಂದಿರಾರನ್ನು ಪ್ರಧಾನಿ ಮಾಡಿದ್ವೋ ಎಂದು ಕಣ್ಣೀರಿಟ್ಟಿದ್ದರು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಶನಿವಾರ ನಗರದ ಮಿನರ್ವ ವೃತ್ತದಲ್ಲಿರುವ ಅರಸೋಜಿ ರಾವ್ ಕಲ್ಯಾಣ ಮಂಟದಲ್ಲಿ ಕಾಮರಾಜ್ ಫೌಂಡೇಷನ್‌ನ 42ನೆ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೆಹರು ನಿಧನದ ನಂತರ ದೇಶದಲ್ಲಿ ನಾಯಕತ್ವದ ಕೊರತೆ ಎದುರಾಗಿತ್ತು. ಈ ಸಂದರ್ಭದಲ್ಲಿ ಕೆ.ಕಾಮರಾಜ್ ಮಧ್ಯಸ್ಥಿಕೆ ವಹಿಸುವ ಮೂಲಕ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದು ಹೇಳಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಲವು ಮೇಧಾವಿ ರಾಜಕೀಯ ನಾಯಕರು ಜೈಲಿಗೆ ಸೇರಿದ್ದರಿಂದ ನಾನು, ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್ ಅವರನ್ನು ಒಳಗೊಂಡ ನಾಯಕರು ಕಾಮರಾಜ್ ಅವರನ್ನು ಭೇಟಿ ಮಾಡಿದ್ದೆವು. ಆ ವೇಳೆ ಇಂದಿರಾಗಾಂಧಿ ಅವರ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ದೇವೇಗೌಡರು ಭಾವುಕರಾಗಿ ನುಡಿದರು.
ಮಾಜಿ ಪ್ರಧಾನಿಗಳಾಗಿರುವ ಜವಾಹರಲಾಲ್ ನೆಹರು ಮತ್ತು ತುರ್ತು ಪರಿಸ್ಥಿತಿ ವೇಳೆ ಕವಲುದಾರಿಯಾಗಿದ್ದ ದೇಶದ ರಾಜಕಾರಣವನ್ನು ಮುನ್ನಡೆಸುವಲ್ಲಿ ಕೆ. ಕಾಮರಾಜ್ ಮಹತ್ವದ ಪಾತ್ರ ನಿರ್ವಹಿಸಿದರು. ಎಲ್ಲರೂ ತಮ್ಮ ಹುದ್ದೆಗಳನ್ನು ಬಿಟ್ಟು ಪಕ್ಷ ಸಂಘಟನೆಗಾಗಿ ಬರುವಂತೆ ಕಾಮರಾಜ್ ಕರೆ ನೀಡಿದ್ದರು. ಇದಕ್ಕೆ ದೇಶದ ಎಲ್ಲ ರಾಜಕಾರಣಿಗಳು ಸ್ವಾಗತಿಸಿದ್ದರು. ಮುಂದಿನ ದಿನಗಳಲ್ಲಿ ಅದು ಕಾಮರಾಜ್ ಪ್ಲಾನ್ ಎಂದು ಪ್ರಸಿದ್ಧಿ ಪಡೆದುಕೊಂಡಿದೆ ಎಂದರು.
ಕಾಮರಾಜ್ ದೇಶದಲ್ಲಿ ಗಾಂಧೀಜಿ ಬಳಿಕ ನಾನು ಕಂಡ ಅತಿ ಸರಳ, ಸಜ್ಜನ ವ್ಯಕ್ತಿಯಾಗಿದ್ದರು. ಹಲವಾರು ಯೋಜನೆಗಳ ಮೂಲಕ ತಮಿಳುನಾಡಿನ ಜನನಾಯಕರಾಗಿದ್ದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹೊಂದಿದ್ದರು ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಮಾತನಾಡಿ, ಕಾಮರಾಜ್ ಈ ತಲೆಮಾರಿನ ಜನರಿಗೆ ಮಾದರಿಯಾಗಿದ್ದಾರೆ. ಸರಳ ಮತ್ತು ಬದ್ಧತೆ ಹೊಂದಿರುವ ರಾಜಕಾರಣಿಯಾಗಿದ್ದರು. ಸಂಕಷ್ಟದಲ್ಲಿದ್ದ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕೇರಳದ ಮಾಜಿ ಸಚಿವ ಡಾ. ಎ. ನೀಲಾಲೊತಿಥದಾಸನ್ ನಾದರ್, ಫೌಂಡೇಷನ್‌ನ ಪ್ರಧಾನ ಕಾರ್ಯದರ್ಶಿ ಡಾ. ಕೆ. ಜಾನ್‌ಕುಮಾರ್, ಫೌಂಡೇಷನ್ ಕಾರ್ಯದರ್ಶಿ ಎಂ.ಎ. ಚೆಲ್ಲಯ್ಯ ಸೇರದಂತೆ ಹಲವರು ಉಪಸ್ಥಿತರಿದ್ದರು.







