ರಮೇಶ್ ಬಿಜೆಪಿ ಸಂಪರ್ಕಕ್ಕೆ ಹೋಗಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ರಾಯಚೂರು, ಡಿ.29: ರಮೇಶ್ ಜಾರಕಿಹೊಳಿ ಎಲ್ಲೋ ಹೊರಗಡೆ ಹೋಗಿದ್ದಾರೆ. ಬೇಸರದಲ್ಲಿದ್ದಾರೆ. ಆದರೆ ಪಕ್ಷ ಬಿಡುವುದಿಲ್ಲ. ನಮ್ಮ ಸಂಪರ್ಕಕ್ಕೆ 4 ದಿನಗಳಿಂದ ಸಿಕ್ಕಿಲ್ಲ. ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು ಕೈ ಬಿಡುವುದು ಸಹಜ ನಿಯಮ. 2- 3 ದಿನದಲ್ಲಿ ಎಲ್ಲ ಸರಿ ಹೋಗುತ್ತದೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಬಿಜೆಪಿ ಸಂಪರ್ಕಕ್ಕೆ ಹೋಗಿಲ್ಲ. ಬಿಜೆಪಿ ಹತಾಶೆಯಲ್ಲಿದೆ, ಉಮೇಶ್ ಕತ್ತಿ 24 ಗಂಟೆ ಅಂದಿದ್ದರೂ ಈಗ 15 ದಿನ ಅಂತಿದ್ದಾರೆ. ಸಿದ್ದರಾಮಯ್ಯನವರ ಮೇಲೆ ನಮಗೇನು ಸಿಟ್ಟಿಲ್ಲ, ಚೆನ್ನಾಗಿದ್ದೇವೆ. ರಮೇಶ್ ಲೋಕಸಭಾ ಚುನಾವಣೆಗೆ ನಿಲ್ಲೊದಾದ್ರೆ ನಿಲ್ಲಲಿ. ಅವರು ಇಷ್ಟಪಟ್ಟರೆ ನಾವು ಬೆಂಬಲಕ್ಕಿರುತ್ತೇವೆ ಎಂದರು.
ಬಸವರಾಜ್ ಹೊರಟ್ಟಿ ಅವರದ್ದು ವೈಯಕ್ತಿಕ ಅಭಿಪ್ರಾಯ. ಜನ ನಮ್ಮನ್ನ ಗೆಲ್ಲಿಸಿದ್ದಾರೆ. ಅವರ ಸೇವೆಗೆ ಸರಕಾರ ಸಿದ್ದವಾಗಿದೆ. ಸಮ್ಮಿಶ್ರ ಸರಕಾರ ಭದ್ರವಾಗಿರುತ್ತದೆ. ರಾಯಚೂರು ಸಂಸದ ಬಿ.ವಿ. ನಾಯಕ್ ಬಿಜೆಪಿಗೆ ಹೋಗಲ್ಲ. ಮುಂದಿನ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆದಿದೆ ಎಂದರು
ಇದೇ ವೇಳೆ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವಿಗೆ ಸತೀಶ್ ಜಾರಕಿಹೊಳಿ ಸಂತಾಪ ಸೂಚಿಸಿದರು. ದಕ್ಷ ಅಧಿಕಾರಿಯನ್ನ ಕಳೆದುಕೊಂಡಿದ್ದು ರಾಜ್ಯಕ್ಕೆ ನಷ್ಟವಾಗಿದೆ. ಇಂತಹ ದಕ್ಷ ಅಧಿಕಾರಿಗಳ ಅವಶ್ಯಕತೆ ನಮಗೆ ಇತ್ತು ಎಂದರು.







