ವಿವಿಐಪಿ ಕಾಪ್ಟರ್ ಪ್ರಕರಣ: ವಿಚಾರಣೆ ವೇಳೆ ‘ಶ್ರೀಮತಿ ಗಾಂಧಿ’ಯನ್ನು ಪ್ರಸ್ತಾಪಿಸಿದ ದಲ್ಲಾಳಿ ಕ್ರಿಶ್ಚಿಯನ್ ಮಿಶೆಲ್
ನ್ಯಾಯಾಲಯದಲ್ಲಿ ಇಡಿ ಹೇಳಿಕೆ

ಹೊಸದಿಲ್ಲಿ,ಡಿ.29: ಆಗಸ್ಟಾ ವೆಸ್ಟ್‌ಲ್ಯಾಂಡ್‌ನಿಂದ ವಿವಿಐಪಿಗಳಿಗಾಗಿ ಹೆಲಿಕಾಪ್ಟರ್‌ಗಳ ಖರೀದಿ ಹಗರಣದಲ್ಲಿ ದಲ್ಲಾಳಿಯಾಗಿದ್ದ ಕ್ರಿಶ್ಚಿಯನ್ ಮಿಶೆಲ್ ವಿಚಾರಣೆ ವೇಳೆ ‘ಶ್ರೀಮತಿ ಗಾಂಧಿ’ ಎಂಬ ಹೆಸರನ್ನು ಪ್ರಸ್ತಾಪಿಸಿದ್ದಾನೆ ಎಂದು ಜಾರಿ ನಿರ್ದೇಶನಾಲಯ(ಇಡಿ)ವು ಶನಿವಾರ ದಿಲ್ಲಿಯ ಪಟಿಯಾಲಾ ಹೌಸ್ ನ್ಯಾಯಾಲಯಕ್ಕೆ ತಿಳಿಸಿತು. ಆದರೆ ‘ಶ್ರೀಮತಿ ಗಾಂಧಿ’ಯ ಗುರುತಿನ ಕುರಿತು ಮತ್ತು ಯಾವ ಸಂದರ್ಭದಲ್ಲಿ ಮಿಶೆಲ್ ಈ ಹೆಸರನ್ನು ಪ್ರಸ್ತಾಪಿಸಿದ್ದ ಎಂಬ ನಿರ್ದಿಷ್ಟ ವಿವರಗಳನ್ನು ಅದು ನೀಡಲಿಲ್ಲ.
ಮಿಶೆಲ್ ‘ಇಟಲಿಯ ಮಹಿಳೆಯ ಪುತ್ರ’ನ ಬಗ್ಗೆಯೂ ಪ್ರಸ್ತಾಪಿಸಿದ್ದ ಮತ್ತು ಆತ ಹೇಗೆ ‘ದೇಶದ ಮುಂದಿನ ಪ್ರಧಾನಿ’ಯಾಗಲಿದ್ದಾನೆ ಎನ್ನುವುದರ ಬಗ್ಗೆಯೂ ಬಾಯಿಬಿಟ್ಟಿದ್ದ ಎಂದು ಇಡಿ ತಿಳಿಸಿತು. ಈ ವೇಳೆ ಮಿಶೆಲ್‌ನನ್ನು ನ್ಯಾಯಾಲಯವು ಇನ್ನೂ ಏಳು ದಿನಗಳ ಅವಧಿಗೆ ಇಡಿ ವಶಕ್ಕೆ ನೀಡಿತು.
ಮಿಶೆಲ್ ಮತ್ತು ಇತರರ ನಡುವಿನ ಸಂವಹನದಲ್ಲಿ ‘ಆರ್’ ಎಂದು ಪ್ರಸ್ತಾಪಿಸಲಾಗಿರುವ ಆ ‘ದೊಡ್ಡ ವ್ಯಕ್ತಿ’ ಯಾರು ಎನ್ನುವುದನ್ನು ನಾವು ಭೇದಿಸಬೇಕಿದೆ ಎಂದೂ ಇಡಿ ನ್ಯಾಯಾಲಯಕ್ಕೆ ತಿಳಿಸಿತು.
ಇಡಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಆರ್‌ಪಿಎನ್ ಸಿಂಗ್ ಅವರು,ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಬಿಜೆಪಿ ನೇತೃತ್ವದ ಕೇಂದ್ರವು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ನಿರ್ದಿಷ್ಟ ಕುಟುಂಬವನ್ನು ಹೆಸರಿಸುವಂತೆ ಮಿಶೆಲ್ ಮೇಲೆ ಒತ್ತಡವನ್ನು ಹೇರಲಾಗಿದೆ. ಕುಟುಂಬವೊಂದನ್ನು ಹೆಸರಿಸುವಂತೆ ಸರಕಾರಿ ಸಂಸ್ಥೆಗಳ ಮೇಲೆ ಒತ್ತಡ ಹೇರಲು ಚೌಕಿದಾರ್(ಪ್ರಧಾನಿ ಮೋದಿ) ಏಕೆ ಪ್ರಯತ್ನಿಸುತ್ತಿದ್ದಾರೆ? ಬಿಜೆಪಿಯಲ್ಲಿನ ಕಥೆ ಹೆಣೆಯುವ ವ್ಯಕ್ತಿಗಳು ಹೆಚ್ಚುವರಿ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಮಿಶೆಲ್‌ನನ್ನು ಯುಎಇ ಸರಕಾರವು ಡಿ.4ರಂದು ಭಾರತಕ್ಕೆ ಗಡಿಪಾರು ಮಾಡಿದ್ದು,15 ದಿನಗಳ ಕಾಲ ಆತ ಸಿಬಿಐ ವಶದಲ್ಲಿದ್ದ. ಡಿ.22ರಂದು ವಿಶೇಷ ಸಿಬಿಐ ನ್ಯಾಯಾಲಯವು ಆತನನ್ನು ಏಳು ದಿನಗಳ ಅವಧಿಗೆ ಇಡಿ ವಶಕ್ಕೆ ಒಪ್ಪಿಸಿತ್ತು.