ಕೈರಂಗಳದಲ್ಲಿ ಕೃಷಿ ಉತ್ಸವ ಉದ್ಘಾಟನೆ

ಕೊಣಾಜೆ, ಡಿ. 29: ಪ್ರಮುಖವಾಗಿ ಯುವ ಸಮುದಾಯ ಕೃಷಿಯನ್ನು ಬಿಟ್ಟು ಸಣ್ಣ ಉದ್ಯೋಗವಾದರೂವ ನಗರದತ್ತ ಕೆಲಸಕ್ಕೆ ಹೋಗುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ದುಡಿದರೆ ಪ್ರತಿಷ್ಠೆಯು ಕಡಿಮೆಯಾಗುತ್ತದೆ ಎಂಬ ಭಾವ ಹೆಚ್ಚಿನವರಲ್ಲಿ ಇದೆ. ಇಂತಹ ಭಾವನೆಗಳನ್ನು ದೂರಗೊಳಿಸಿ ಬಂಗಾರದಂತಹ ಆದಾಯ ನೀಡುವ ಕೃಷಿಯತ್ತ ಆಕರ್ಷಿತರನ್ನಾಗಿಸಬೇಕು. ಇಂತಹ ಕೃಷಿ ಉತ್ಸವಗಳು ಇದಕ್ಕೆ ಪ್ರೇರಣೆಯಾಗಿದೆ ಎಂದು ಅಂತರಾಷ್ಟ್ರೀಯ ಖ್ಯಾತಿಯ ಕೃಷಿ ಅರ್ಥಶಾಸ್ತ್ರಜ್ಞ ಹಾಗೂ ಪೆರ್ಲ ನಳಂದ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಘ್ನೇಶ್ವರ ವರ್ಮುಡಿ ಅವರು ಅಭಿಪ್ರಾಯಪಟ್ಟರು.
ಅವರು ಕೈರಂಗಳ ಗ್ರಾಮದ ಪುಣ್ಯಕೋಟಿನಗರ ಶ್ರೀ ಶಾರದಾಗಣಪತಿ ವಿದ್ಯಾಕೇಂದ್ರದಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ಕೃಷಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶವು ಕೃಷಿ ಕ್ಷೇತ್ರವನ್ನೇ ಅವಲಂಬಿಸಿದ್ದರೂ ಕೃಷಿ ಕ್ಷೇತ್ರ ಇಂದು ದಯಾನಿಯ ಸ್ಥಿತಿಯಲ್ಲಿರುವುದು ಹಾಗೂ ಸೋಲುತ್ತಿರುವುದು ವಿಪರ್ಯಾಸವಾಗಿದೆ. ದೇಶದ ಶೇಕಡಾ 53 ರಷ್ಟು ಜನ ಇಂದಿಗೂ ಕೃಷಿ ಕ್ಷೇತ್ರದ ಉದ್ಯೋಗವನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಸಂಸ್ಕಾರಯುತ ಜೀವನ ಹಾಗೂ ರಾಷ್ಟ್ರೀಯ ಆದಾಯಕ್ಕೆ ಕೃಷಿಯೇ ಕಾರಣವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದ.ಕ.ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷರಾದ ಹರೀಶ್ ಆಚಾರ್ ಅವರು ಮಾತನಾಡಿ, ಗಾಂಧೀಜಿವರು ಕಂಡ ಗ್ರಾಮೀಣ ಸಮಾಜದ ಕಲ್ಪನೆಯಂತೆ ಗ್ರಾಮ ಸಮಾಜ, ಕೃಷಿ ಪರಂಪರೆ, ಕೃಷಿ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಕಾರ್ಯ ಆಗಬೇಕಿದೆ. ಇಂತಹ ಕೃಷಿ ಉತ್ಸವಗಳು ಕೃಷಿಕರ ಉತ್ಸಾಹವನ್ನು ಹೆಚ್ಚಿಸಲಿದೆ ಎಂದರು.
ಕೃಷಿ ಉತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ, ಕೃಷಿಯತ್ತ ಯುವಕರು ಆಕರ್ಷಿತರಾದರೇ ಇಡೀ ರಾಷ್ಟ್ರವೇ ಅಭಿವೃದ್ದಿ ಪಥದಲ್ಲಿ ಮುನ್ನಡೆಯಲಿದೆ. ಈ ನಿಟ್ಟಿನಲ್ಲಿ ಕೈರಂಗಳದಲ್ಲಿ ರಾಜಾರಾಮ್ ಭಟ್ ಅವರ ನೇತೃತ್ವದಲ್ಲಿ ಕೃಷಿ ಉತ್ಸವನ್ನು ಏರ್ಪಡಿಸಲಾಗಿದ್ದು, ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಆಚಾರ್, ಜಯಶಂಕರ್ ಬ್ರಾಸಿತ್ತಾಯ, ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ದೇವದಾಸ್ ಭಂಡಾರಿ, ಪಟಿಕಲ್ಲು ಶಂಕರ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಉತ್ಸವ ಸಮಿತಿಯ ಸಂಚಾಲಕರಾದ ಟಿ.ಜಿ.ರಾಜಾರಾಂ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ಯೋಗಿತ ವಂದಿಸಿದರು.
''ಕೃಷಿ ಉತ್ಸವಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಈಗಾಗಲೇ ನೂರಕ್ಕೂ ಹೆಚ್ಚು ಕೃಷಿ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ಡಿಸೆಂಬರ್ ನಲ್ಲಿಯೂ ಮೈದಾನವನ್ನು ಮತ್ತಷ್ಟು ವಿಸ್ತರಿಸಿ ಉತ್ಸವದ ಮೆರುಗನ್ನು ಹೆಚ್ಚಿಸಲಾಗುವುದು''.
- ಟಿ.ಜಿ.ರಾಜಾರಾಂ ಭಟ್, ಉತ್ಸವ ಸಮಿತಿಯ ಸಂಚಾಲಕರು.







