ಸಂಘಟನೆಗಳು ರಾಜಕಾರಣಿಗಳ ಆಮಿಷಕ್ಕೆ ಬಲಿಯಾಗಬಾರದು: ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ
ಬೆಂಗಳೂರು, ಡಿ.29: ಸರಕಾರಿ ಸಂಘಟನೆಗಳು ಸೇರಿ ಇನ್ನಿತರ ಜನಪರ ಸಂಘಟನೆಗಳು ಗುಂಪುಗಾರಿಕೆಯನ್ನು ಬಿಟ್ಟು ಕೆಲಸ ಮಾಡಿದರೆ, ಧ್ವನಿ ಇಲ್ಲದವರಿಗೆ ಹಾಗೂ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿಕೊಡಲು ಸಾಧ್ಯವಾಗುತ್ತದೆ ಎಂದು ಎಂದು ಮಾಜಿ ಶಾಸಕ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಟಿ.ಕೃಷ್ಣಪ್ಪ ಹೇಳಿದ್ದಾರೆ.
ಶನಿವಾರ ನಗರದ ಸರಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಕರಾಸ ನೌಕರರ ಸಂಘದ ನೂತನ ಸಭಾಂಗಣ-2 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತ ಪರ ಸಂಘಟನೆಗಳನ್ನೇ ಛಿದ್ರವಾಗಿಸಿದರು. ಇಂತಹ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ. ಹೀಗಾಗಿ, ಸರಕಾರಿ ನೌಕರರ ಸಂಘಗಳು ಯಾವುದೇ ರಾಜಕಾರಣಿಯ ಹಾಗೂ ರಾಜಕೀಯ ಪಕ್ಷಗಳ ಆಮಿಷಕ್ಕೆ ಒಳಗಾಗದೇ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಹಾಗೂ ಸರಕಾರಿ ನೌಕರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಮೂರ್ನಾಲ್ಕು ದಶಕಗಳ ಹಿಂದೆ ಸರಕಾರಿ ನೌಕರರ ಸಂಘಟನೆಗಳು ಇಷ್ಟು ಬಲಿಷ್ಠವಾಗಿರಲಿಲ್ಲ. ಆದರೆ, ಆಗ ಸಂಘಟನೆಗಳ ಅಭಿವೃದ್ಧಿಗೆ ನಾನು ಸೇರಿದಂತೆ ಇನ್ನಿತರರು ಸಾಕಷ್ಟು ಶ್ರಮ ವಹಿಸುತ್ತಿದ್ದೆವು. ಇಂದು ಸರಕಾರಿ ನೌಕರರ ಸಂಘಟನೆಗಳು ಬಲಿಷ್ಠ ಆಗುವುದರ ಜೊತೆಗೆ ಆರ್ಥಿಕವಾಗಿಯೂ ಶಕ್ತಿಯುತವಾಗಿವೆ ಎಂದು ತಿಳಿಸಿದರು.
ಸಂಪರ್ಕ ಮತ್ತು ಕಟ್ಟಡ(ದಕ್ಷಿಣ) ಬೆಂಗಳೂರು ಮುಖ್ಯ ಅಭಿಯಂತರ ಶ್ರೀನಿವಾಸ್ ಮಾತನಾಡಿ, ಇಂದು ಉದ್ಘಾಟನೆಗೊಂಡಿರುವ ನೂತನ ಸಭಾಂಗಣ ನಿರ್ಮಾಣಕ್ಕೆ ಸಾಕಷ್ಟು ಶ್ರಮ ವಹಿಸಲಾಗಿತ್ತು. ಇದೇ ಕಟ್ಟಡದ ವ್ಯಾಪ್ತಿಯಲ್ಲಿ ಮತ್ತೊಂದು ನೌಕರರ ಭವನ ನಿರ್ಮಾಣ ಮಾಡಲು ಈಗಾಗಲೇ ಚಿಂತನೆ ನಡೆದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರಾಸನೌಸ ಅಧ್ಯಕ್ಷ ಎಚ್.ಕೆ.ರಾಮು, ಕರಾಸನೌಸ ನಿಕಟಪೂರ್ವ ಅಧ್ಯಕ್ಷರುಗಳಾದ ಬಿ.ಪಿ.ಮಂಜೇಗೌಡ, ಕೆ.ಸಿಪ್ಪೇಗೌಡ, ಎಚ್.ಎನ್.ಶೇಷೇಗೌಡ, ಡಾ.ಎಲ್.ಬೈರಪ್ಪ, ನಿಕಟಪೂರ್ವ ಖಜಾಂಚಿ ಯೋಗಾನಂ ಮತ್ತಿತರರು ಉಪಸ್ಥಿತರಿದ್ದರು.







