ಪಹಣಿ ದರ ಹೆಚ್ಚಳ: ಜಾತಿ-ಆದಾಯ ಪ್ರಮಾಣ ಪತ್ರಗಳು ದುಬಾರಿ
ಬೆಂಗಳೂರು, ಡಿ.29: ಅಟಲ್ ಜನಸ್ನೇಹಿ ಕೇಂದ್ರಗಳು ಹಾಗೂ ಫ್ರಂಟ್ ಆಫೀಸ್‌ಗಳ ಮೂಲಕ ವಿತರಿಸುವ ಪಹಣಿ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣ ಪತ್ರ ಸೇರಿ ವಿವಿಧ ಸೇವೆಗಳ ಬಳಕೆದಾರರ ಶುಲ್ಕವನ್ನು ರಾಜ್ಯ ಸರಕಾರ ಹೆಚ್ಚಳ ಮಾಡಿದೆ.
ಪಹಣಿ ಸೇರಿ ಭೂಮಿ ಯೋಜನೆಯ ಸೇವೆಗಳಿಗೆ ಪ್ರಸ್ತುತ ಇರುವ 10 ರೂ.ನಿಂದ 15ರೂ.ಗೆ ಹೆಚ್ಚಳವಾಗಿದ್ದರೆ, ಜಾತಿ, ಆದಾಯ ಪ್ರಮಾಣ ಪತ್ರ, ವಾಸ ಸ್ಥಳ ದೃಢೀಕರಣದಂತಹ ತಲಾ 15 ರೂ. ಇದ್ದ ಸೇವೆಗಳು 25 ರೂ.ಆಗಲಿವೆ. ಕಂಪ್ಯೂಟರ್, ಪ್ರಿಂಟರ್ ಸೇರಿ ವಿವಿಧ ಮೂಲಸೌಕರ್ಯ ನಿರ್ವಹಣೆ, ಮೇಲ್ದರ್ಜೆಯ ಕಾರಣಕ್ಕೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಕಂದಾಯ ಇಲಾಖೆ ಆದೇಶಿಸಿದೆ.
ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ಕಡೆ ಒದಗಿಸಲು ಹೋಬಳಿ ಮಟ್ಟದಲ್ಲಿ ರಾಜ್ಯಾದ್ಯಂತ 769 ಅಟಲ್ ಜನಸ್ನೇಹಿ ಕೇಂದ್ರಗಳು ಹಾಗೂ 122 ಫ್ರಂಟ್ ಆಫೀಸ್‌ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ವರ್ಷ ಅಂದಾಜು 1.1 ಕೋಟಿ ಜಾತಿ, ಆದಾಯ, ವಾಸಸ್ಥಳ ದೃಢೀಕರಣ ಪತ್ರ, 1.5 ಕೋಟಿ ಪಹಣಿ ಮತ್ತು ಇತರೆ ಭೂಮಿ ಸೇವೆ ನೀಡಲಾಗುತ್ತಿದೆ. ಪ್ರಸ್ತುತ ಬಳಕೆದಾರರ ಶುಲ್ಕದಿಂದ ದೊರಕುತ್ತಿರುವ ಹಣದ ಮೊತ್ತ ಒಟ್ಟು ನಿರ್ವಹಣೆ ವೆಚ್ಚಕ್ಕಿಂತಲೂ ಕಡಿಮೆ ಇದೆ. ಶುಲ್ಕ ಪರಿಷ್ಕರಿಸದಿದ್ದಲ್ಲಿ ಭವಿಷ್ಯದಲ್ಲಿ ಸೇವೆಗಳಿಗೆ ತೊಂದರೆ ಆಗುವ ಅಪಾಯವಿದೆ ಎಂದು ಆದೇಶದಲ್ಲಿ ಸಮರ್ಥನೆ ನೀಡಲಾಗಿದೆ. ಅದೇ ರೀತಿ, ಅಂಚೆ ಮೂಲಕ ಪ್ರಮಾಣ ಪತ್ರ ಪಡೆಯುವವರಿಗೂ ಪ್ರತ್ಯೇಕ ಶುಲ್ಕ ನಿಗದಿ ಮಾಡಿ ಆದೇಶಿಸಲಾಗಿದೆ.







