ಅಮೆರಿಕದ ಹಿರಿಯಜ್ಜ ಇನ್ನಿಲ್ಲ
112 ವರ್ಷ ವಯಸ್ಸಿನ ರಿಚರ್ಡ್ ಓವರ್ಟನ್ ನಿಧನ

ವಾಶಿಂಗ್ಟನ್,ಡಿ.29: ಅಮೆರಿಕದ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿ ರಿಚರ್ಡ್ ಓವರ್ಟನ್ ಶನಿವಾರ ನಿಧನರಾದರು. ಅವರಿಗೆ 112 ವರ್ಷ ವಯಸ್ಸಾಗಿತ್ತು.
ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದ ನಿವಾಸಿಯಾಗಿದ್ದ ಓವರ್ಟನ್, ಗುರುವಾರ ವೃದ್ಧಾಶ್ರಮವೊಂದರಲ್ಲಿ ಕೊನೆಯುಸಿರೆಳೆದರೆಂದು ಅವರ ಸೋದರ ಸಂಬಂಧಿ ವೋಲ್ಮಾ ಓವರ್ಟನ್ ಜೂನಿಯರ್ ತಿಳಿಸಿದ್ದಾರೆ.
ನ್ಯೂಮೊನಿಯಾದಿಂದ ಬಾಧಿತರಾಗಿದ್ದ ಅವರು ಈ ತಿಂಗಳ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. 2013ರಲ್ಲಿ ಆಸ್ಟಿನ್ ವಾಶಿಂಗ್ಟನ್‌ಗೆ ಆಗಮಿಸಿ, ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಶ್ವೇತಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಆಸ್ಟಿನ್ ಅವರ 111ನೇ ಜನ್ಮದಿನಾಚರಣೆಯಂದು ಅವರು ವಾಸವಾಗಿದ್ದ ಬೀದಿಗೆ ‘‘ ರಿಚರ್ಡ್ ಓವರ್ಟನ್ ಆವೆನ್ಯೂ’ ರಸ್ತೆ ಎಂಬುದಾಗಿ ಮರುನಾಮಕರಣ ಮಾಡಲಾಗಿತ್ತು. ಓವರ್ಟನ್ ಅವರುತ 1906ರ ಮೇ 11ರಂದು ಟೆಕ್ಸಾಸ್‌ನಲ್ಲಿ ಜನಿಸಿದ್ದರು. ಅವರು 1942ರಿಂದ 1945ರವರೆಗೆ ಅಮೆರಿಕ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಸೇವೆಯಿಂದ ನಿವೃತ್ತಿಯಾದ ಬಳಿಕ ಅವರು ಪೀಠೋಪಕರಣಗಳ ಅಂಗಡಿ ಹಾಗೂ ರಾಜ್ಯ ಖಜಾಂಚಿಯ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದರು.





