ರಾಜ್ಯದಲ್ಲಿ ಮಹಿಳಾ ವೀರಗಲ್ಲುಗಳು ಹೆಚ್ಚಿವೆ: ಹಿರಿಯ ಸಂಶೋಧಕ ಡಾ.ಆರ್.ಶೇಷಶಾಸ್ತ್ರಿ
ಬೆಂಗಳೂರು, ಡಿ.29: ಕರ್ನಾಟಕದಲ್ಲಿ ಸಿಗುವಷ್ಟು ಮಹಿಳೆಯರಿಗೆ ಸಂಬಂಧಿಸಿದ ವೀರಗಲ್ಲು ದೇಶದ ಇತರೆ ಭಾಗಗಳಲ್ಲಿ ಕಾಣಸಿಗುವುದಿಲ್ಲವೆಂದು ಹಿರಿಯ ಸಂಶೋಧಕ ಡಾ.ಆರ್.ಶೇಷಶಾಸ್ತ್ರಿ ತಿಳಿಸಿದರು.
ಎಚ್‌ಎಎಲ್ ಕೇಂದ್ರೀಯ ಕನ್ನಡಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ವೀರಪರಂಪರೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮಹಿಳೆಗೂ ಸಮಾನ ಅವಕಾಶ, ಸ್ಥಾನಮಾನಗಳಿದ್ದವು. ಹಾಗೂ ಊರು, ಪ್ರಾಂತ್ಯಗಳ ರಕ್ಷಣೆಯಲ್ಲಿ ಮಹಿಳೆ ವಿಶೇಷ ಪಾತ್ರ ವಹಿಸಿದ್ದರು ಎಂಬುದನ್ನು ರಾಜ್ಯದಲ್ಲಿ ಸಿಕ್ಕಿರುವ ಮಹಿಳೆಗೆ ಸಂಬಂಧಿಸಿದ ವೀರ ಗಲ್ಲುಗಳು ಸಾಕ್ಷಿ ಒದಗಿಸುತ್ತವೆ ಎಂದು ತಿಳಿಸಿದರು.
ಕೇವಲ ದೈಹಿಕವಾಗಿ ಬಲಿಷ್ಠನಾಗಿದ್ದರೆ ಮಾತ್ರ ವೀರ ಎನ್ನಲಾಗುವುದಿಲ್ಲ. ಬದುಕಿನಲ್ಲಿ ಮೌಲ್ಯಗಳನ್ನು ಹೊಂದಿರಬೇಕು. ಅಮಾಯಕರ ರಕ್ಷಣೆಗೆ ಬದ್ಧನಾಗಿರಬೇಕೆ ವಿನಃ ಕಾಲು ಕೆರೆದು ಜಗಳ ಮಾಡುವುದಲ್ಲ. ಇಂತಹ ನೈತಿಕ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಗಳನ್ನು ನಮ್ಮ ಪರಂಪರೆಯು ವೀರಗಲ್ಲುಗಳನ್ನಾಗಿ ಸ್ಥಾಪಿಸಿ ಇವತ್ತಿಗೂ ನೆನೆಯುತ್ತಾ ಬಂದಿದ್ದಾರೆ ಎಂದು ಅವರು ಹೇಳಿದರು.
ಹಿಂದಿನ ದಿನಗಳಲ್ಲಿ ಜನತೆ ತಮ್ಮ ಬದುಕಿನ ಕುರಿತು ಅತ್ಯಂತ ಉತ್ಸಾಹಭರಿತರಾಗಿದ್ದರು. ಆದರೆ, ಇವತ್ತಿನ ಆಧುನಿಕ ಜೀವನದಲ್ಲಿ ತಮ್ಮ ವೈಯಕ್ತಿಕ ಬದುಕುಗಳ ಕುರಿತು ವೈರಾಗ್ಯ ತಾಳಿದ್ದಾರೆ. ಇಂತಹ ಮನಸ್ಥಿತಿಯಿಂದ ಹೊರ ಬಂದು, ಬದುಕುಗಳನ್ನು ಪ್ರೀತಿಯಿಂದ ಸೃಜನಶೀಲವಾಗಿ ಕಟ್ಟಿಕೊಳ್ಳಬೇಕಿದೆ ಎಂದು ಅವರು ಆಶಿಸಿದರು. ಕಾರ್ಯಕ್ರಮದಲ್ಲಿ ಎಚ್‌ಎಎಲ್ ಅಚ್ಚು ಮತ್ತು ಎರಕ ವಿಭಾಗದ ವ್ಯವಸ್ಥಾಪಕ ಮೋಹನ್ ಲಾಲ್, ಕನ್ನಡಪರ ಹೋರಾಟಗಾರ ರಾ.ನಂ.ಚಂದ್ರಶೇಖರ್ ಮತ್ತಿತರರಿದ್ದರು.







