ಅಧಿಕಾರವನ್ನು ಮರಳಿ ಪಡೆಯಲು ಅಮೆರಿಕದ ರಹಸ್ಯ ಬೆಂಬಲ ಕೋರಿದ್ದ ಮುಶರ್ರಫ್
ವಿವಾದಾತ್ಮಕ ವೀಡಿಯೊ ಬಹಿರಂಗ

ಇಸ್ಲಾಮಾಬಾದ್,ಡಿ. 29: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಝ್ ಮುಶರ್ರಫ್ ಅವರಿಗೆ ಮುಜುಗರವುಂಟು ಮಾಡುವಂತಹ ವೀಡಿಯೊವೊಂದು ಸೋರಿಕೆಯಾಗಿದ್ದು, ಅದರಲ್ಲಿ ಅವರು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವುದಕ್ಕಾಗಿ ಅಮೆರಿಕದ ಬೆಂಬಲವನ್ನು ಕೋರುವ ದೃಶ್ಯವೊಂದು ದಾಖಲಾಗಿದೆ. ಅಲ್‌ಖಾಯಿದ ವರಿಷ್ಠ ಉಸಾಮಾ ಬಿನ್ ಲಾದೆನ್ ಎಲ್ಲಿದ್ದಾನೆಂಬ ವಿವರಗಳ ಬಗ್ಗೆ ಪಾಕ್ ಬೇಹುಗಾರ ಸಂಘಟನೆ ಐಎಸ್‌ಐ ನಿರ್ಲಕ್ಷ ತಾಳಿರುವುದು ತನಗೆ ಮುಜುಗರವನ್ನುಂಟು ಮಾಡಿದೆಯೆಂದು ಮುಶರ್ರಫ್ ಅಮೆರಿಕದ ಸಂಸದರಿಗೆ ಹೇಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಪಾಕಿಸ್ತಾನದ ಭಿನ್ನಮತೀಯ ಅಂಕಣಕಾರ ಗುಲ್ ಬುಖಾರಿ, ಈ ವಿವಾದಾತ್ಮಕ ವೀಡಿಯೊದ ಕ್ಲಿಪ್ಪಿಂಗ್‌ಗಳನ್ನು ಪ್ರಸಾರ ಮಾಡಿದ್ದಾರೆ. 9/11 ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಅಮೆರಿಕದ ಗೂಢಚರ್ಯೆ ಸಂಸ್ಥೆ ಸಿಐಎ ನಿರ್ಲಕ್ಷ್ಯ ವಹಿಸಿತ್ತಾದ್ದರಿಂದ ಐಎಸ್‌ಐನ ನಿರ್ಲಕ್ಷತನಕೂಡಾ ಕ್ಷಮಾರ್ಹವಾಗಿದೆಯೆದು ತಾನು ಭಾವಿಸಿರುವುದಾಗಿ ಪಾಕಿಸ್ತಾನದಿಂದ ಸ್ವಯಂಪ್ರೇರಿತವಾಗಿ ದೇಶಭ್ರಷ್ಟರಾಗಿರುವ ಮುಶರ್ರಫ್ ಹೇಳುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ನಿವೃತ್ತ ಜನರಲ್ 75 ವರ್ಷ ವಯಸ್ಸಿನ ಮುಶರ್ರಫ್ ಅವರು 2001ರಿಂದ 2008ರ ನಡುವೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಆನಂತರ ಪಾಕ್ ಸಂಸತ್‌ನ ಮಹಾಭಿಯೋಗದಿಂದ ಪಾರಾಗಲು ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು..
ಪಾಕ್ ಅಧ್ಯಕ್ಷ ಹುದ್ದೆಯನ್ನು ತ್ಯಜಿಸಿದ ಬಳಿಕ ಮುಶರ್ರಫ್ ಅವರು ದುಬೈನಲ್ಲಿ ವಾಸವಾಗಿದ್ದರು. ಭದ್ರತೆ ಹಾಗೂ ಆರೋಗ್ಯದ ಕಾರಣಗಳನ್ನು ನೀಡ್ನಿ, ಅವರು ಪಾಕ್‌ಗೆ ಬರಲು ನಿರಾಕರಿಸಿದ್ದಾರೆ. 2007ರಲ್ಲಿ ಸಂವಿಧಾನವನ್ನು ಅಮಾನತಿನಲ್ಲಿರಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಅವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿತ್ತು.
‘‘ ನಾನೇನು ಹೇಳುತ್ತಿದ್ದೇನೆಂದರೆ, ಈ ಹಿಂದೆ ನಾನು ಕೆಲವು ನಿರ್ದಿಷ್ಟವಾದ ಸಾಧನೆಗಳನ್ನು ಮಾಡಿದ್ದೇನೆ. ನನಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾಗಿದೆ ಹಾಗೂ ಇದಕ್ಕಾಗಿ ನನಗೆ ಬೆಂಬಲದ ಅಗತ್ಯವಿದೆ. ಅದನ್ನು ಬಹಿರಂಗವಾಗಿ ನೀಡಲು ಸಾಧ್ಯವಿಲ್ಲ. ಅದನ್ನು ಗುಪ್ತವಾದ ರೀತಿಯಲ್ಲಿ ನೀಡಬೇಕಾಗುತ್ತದೆ. ಹಾಗಾದಲ್ಲಿ ನಾನು ಮತ್ತೊಮ್ಮೆ ಗೆಲ್ಲುವೆ’’ ಎಂದು ಮುಶರ್ರಫ್ ಅಮೆರಿಕದ ಸಂಸದರೊಂದಿಗೆ ಹೇಳಿಕೊಂಡಿರುವುದು ಸೋರಿಕೆಯಾದ ವೀಡಿಯೊದಲ್ಲಿ ಕಂಡುಬಂದಿದೆ.
ಭಯೋತ್ಪಾದಕರ ವಿರುದ್ಧ ಹೋರಾಡುವುದಕ್ಕಾಗಿ ಅಮೆರಿಕ ನೀಡಿದ ಹಣವನ್ನು ಪಾಕಿಸ್ತಾನವು ತನ್ನ ಜನತೆಯ ಬಡತನವನ್ನು ಶೇ.34ರಿಂದ ಶೇ.14ಕ್ಕೆ ಇಳಿಸಲು ಬಳಸಿಕೊಂಡಿತೆಂದು ಕೂಡಾ ಮುಶರ್ರಫ್ ಹೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಕೆಲವರು ಈ ಬಗ್ಗೆ ಗಮನಸೆಳೆದು, ಪಾಕಿಸ್ತಾನದ ಕಡುಬಡತನದ ಕಾರಣದಿಂದಾಗಿ ಆ ದೇಶಕ್ಕೆ 20 ಶತಕೋಟಿ ಡಾಲರ್‌ಗಳ ನೆರವು ನೀಡಲು ಅಮೆರಿಕ ಕಾಂಗ್ರೆಸ್‌ನ ಯಾವುದೇ ಸದಸ್ಯರು ಮುಂದೆ ಬಂದಿಲ್ಲವೆಂದು ಹೇಳಿದರು.
4/7 pic.twitter.com/Fh08ivTEp5
— Gul Bukhari (@GulBukhari) December 28, 2018







