ಒಣ ತ್ಯಾಜ್ಯದಿಂದ ಬೆಂಗಳೂರು ನಗರ ಜಿಪಂ ಗೆ ಲಕ್ಷಾಂತರ ರೂ.ಆದಾಯ
ಬೆಂಗಳೂರು, ಡಿ.29: ಪ್ಲಾಸ್ಟಿಕ್ ಬಾಟಲಿ, ಕೈ ಚೀಲ, ಬಟ್ಟೆ ಬ್ಯಾಗ್ ಹಾಗೂ ಬಳಕೆಗೆ ಬರುವ ಕಾಗದದ ರಟ್ಟು ಸೇರಿ ವಿವಿಧ ಬಗೆಯ ಒಣ ತ್ಯಾಜ್ಯ ಮಾರಾಟದಿಂದಲೇ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಲಕ್ಷಾಂತರ ರೂ. ಆದಾಯ ಗಳಿಸುತ್ತಿದೆ.
ನಗರ ಜಿ.ಪಂ ವ್ಯಾಪ್ತಿ ದಿನೇ ದಿನೇ ವಿಸ್ತಾರವಾಗುತ್ತಿದ್ದು, ಕಸದ ವಿಲೇವಾರಿ ಸಮಸ್ಯೆ ಸವಾಲಾಗಿ ಪರಿಣಮಿಸುತ್ತಿದೆ. ಸಮರ್ಪಕ ಕಸ ವಿಲೇವಾರಿ ಸಂಬಂಧ ನಗರ ಜಿಲ್ಲಾಡಳಿತ ಈಗಾಗಲೇ ಹಲವು ಯೋಜನೆಗಳನ್ನು ರೂಪಿಸಿದೆ. ಜಾಗದ ಕೊರತೆಯಿಂದಾಗಿ ಯೋಜನೆಗಳ ಜಾರಿಗೆ ಹಿನ್ನೆಡೆಯಾಗಿದೆ. ಈ ನಡುವೆಯೇ ಹಲವು ಪ್ರಯೋಗ ನಡೆಸಿರುವ ನಗರ ಜಿ.ಪಂ ಈಗ ತನ್ನ ವ್ಯಾಪ್ತಿಯಲ್ಲಿ ಬಳಕೆಯಾಗದೆ ಉಳಿದಿರುವ ಸರಕಾರಿ ಕಟ್ಟಡಗಳನ್ನು ಒಣ ಕಸ ನಿರ್ವಹಣೆಗಾಗಿ ಬಳಸಿಕೊಂಡು ಆ ಕಸದಿಂದಲೇ ಆದಾಯ ಗಳಿಸುವ ಹೊಸ ಹೆಜ್ಜೆ ಇರಿಸಿದೆ.
ಸರಕಾರಿ ಕಟ್ಟಡಗಳ ಹುಡುಕಾಟ: ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆಯ ಕೃಷಿ ಉತ್ಪನ್ನಗಳ ಮಾರಾಟ ಮಂಡಳಿಯಲ್ಲಿ (ಎಪಿಎಂಸಿ) ಬಳಕೆಯಾಗದೆ ಉಳಿದಿದ್ದ ಸರಕಾರಿ ಕಟ್ಟಡವನ್ನು, ನಗರ ಜಿಲ್ಲಾಡಳಿತ ಆರು ತಿಂಗಳಿಂದ ಒಣ ಕಸ ನಿರ್ವಹಣೆಗೆ ಬಳಸಿಕೊಳ್ಳುತ್ತಿದೆ. ಪ್ರತಿ ನಿತ್ಯ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್, ಬಾಟಲಿ, ಕೈ ಚೀಲ, ಬಟ್ಟೆ ಬ್ಯಾಗ್ ಮತ್ತು ಬಳಸಬಹುದಾದ ಕಾಗದದ ರಟ್ಟು ಸೇರಿ ಹಲವು ಸಾಮಗ್ರಿಗಳನ್ನು ಪ್ರತ್ಯೇಕಿಸಿ, ಮರು ಬಳಕೆ ಮಾಡುವ ಕೆಲಸ ನಡೆದಿದೆ. ಈ ಕಾರ್ಯದಿಂದ ಬೆಂಗಳೂರು ಜಿಲ್ಲಾಡಳಿತಕ್ಕೆ ಲಕ್ಷಾಂತರ ರೂ. ಆದಾಯ ಬಂದಿದ್ದು, ಈ ಯೋಜನೆ ಯಶಸ್ಸಿನ ಖುಷಿಯಲ್ಲಿರುವ ನಗರ ಜಿ.ಪಂ ಮುಂದಿನ ದಿನಗಳಲ್ಲಿ ಹಲವೆಡೆ ಯೋಜನೆ ವಿಸ್ತರಿಸುವ ಆಲೋಚನೆಯಲ್ಲಿದೆ.
ಈ ಹಿನ್ನೆಲೆಯಲ್ಲಿ ಜಿ.ಪಂ ವ್ಯಾಪ್ತಿಯಲ್ಲಿ ಬಳಕೆಯಾಗದೆ ಉಳಿದಿರುವ ಸರಕಾರಿ ಕಟ್ಟಡಗಳ ಹುಡುಕಾಟ ನಡೆಸಿದೆ. ಜತೆಗೆ ಬೆಂಗಳೂರು ಉತ್ತರ ತಾಲೂಕಿನ ಹೆಸರುಘಟ್ಟ ಮತ್ತು ಹುರುಳಿ ಚಿಕ್ಕನಹಳ್ಳಿಯಲ್ಲಿ ಬಳಕೆಯಾಗದೆ ಇರುವ ಸರಕಾರಿ ಕಟ್ಟಡಗಳನ್ನು ಜಿಲ್ಲಾಡಳಿತ ಪತ್ತೆ ಹಚ್ಚಿದ್ದು, ಈ ಕಟ್ಟಡಗಳನ್ನು ಒಣಕಸ ನಿರ್ವಹಣೆಗೆ ಬಳಸುವ ಚಿಂತನೆ ನಡೆಸಿದೆ. ಶೀಘ್ರದಲ್ಲೆ ಈ ಕಟ್ಟಡಗಳಲ್ಲಿ ಕೆಲಸ ಆರಂಭಿಸುವುದಾಗಿ ಬೆಂಗಳೂರು ನಗರ ಜಿ.ಪಂ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಣ ಕಸ ನಿರ್ವಹಣಾ ತಂಡ ಉಡುಪಿಗೆ ಭೇಟಿ: ಬೆಂಗಳೂರು ನಗರ ಜಿಲ್ಲಾಡಳಿತದ ಒಂದು ತಂಡ ಈಗಾಗಲೇ ಉಡುಪಿ ಜಿಲ್ಲೆಗೆ ಭೇಟಿ ನೀಡಿ ತ್ಯಾಜ್ಯ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದೆ. ಅಧಿಕಾರಿಗಳ ತಂಡ ಉಡುಪಿಯಿಂದ ಬಂದ ಬಳಿಕ ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆಯಲ್ಲಿ ಒಣ ಕಸ ನಿರ್ವಹಣೆ ಮಾಡುವ ಕೆಲಸ ಪ್ರಾರಂಭಿಸಲಾಗಿದೆ.







