ಜಾತ್ಯಾತೀತ ಮನೋಭಾವದಿಂದ ಮೂಡಿಬಂದ ಆಶಯವೇ ವಿಶ್ವಮಾನವ ಸಂದೇಶ: ಉಪಸಭಾಪತಿ ಧರ್ಮೇಗೌಡ
ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ

ಚಿಕ್ಕಮಗಳೂರು.ಡಿ.29: ವೈಚಾರಿಕ ದೃಷ್ಠಿಯನ್ನು ಇಟ್ಟುಕೊಂಡ ಕುವೆಂಪು ಅವರದ್ದು ಆ ಮತ, ಈ ಮತ ಬೇಡ. ಮನುಜ ಮತ ಬೇಕು ಎಂಬ ಆಶಯವಾಗಿತ್ತು ಎಂದು ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಹೇಳಿದರು.
ಅವರು ಇಂದು ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆ ಅಂಗವಾಗಿ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾತ್ಯಾತೀತ ಮನೋಭಾವದಿಂದ ಮೂಡಿಬಂದ ಆಶಯವೇ ವಿಶ್ವ ಮಾನವ ಸಂದೇಶವಾಗಿತ್ತು. ಮುಂದಿನ ದಿನಗಳಲ್ಲಿ ಮನುಜ ಮತ ಬೇಕಾಗಿದ್ದು ಈ ನಿಟ್ಟಿನಲ್ಲಿ ಕುವೆಂಪು ರವರ ಜನ್ಮದಿನಾಚರಣೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಆಗಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ತಿಳಿಸಿದರು.
ಪ್ರತಿಯೊಂದು ಮಗು ಹುಟ್ಟುವಾಗಲೇ ವಿಶ್ವ ಮಾನವನಾಗಿ ಹುಟ್ಟುತ್ತದೆ. ಎಲ್ಲರೂ ತಮ್ಮ ಜೀವನದಲ್ಲಿ ಸಮನ್ವಯತೆಯನ್ನು ಬೆಳೆಸಿಕೊಳ್ಳುವ ಮೂಲಕ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಶಾಸಕ ಸಿ.ಟಿ.ರವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುವೆಂಪು ರವರು ತಾವು ರಚಿಸಿದ ನಾಡಗೀತೆಗೆ ತಾಯಿ ಮಕ್ಕಳ ಸಂಬಂಧ ಕಟ್ಟಿಕೊಟ್ಟಿದ್ದಾರೆ. ಕುವೆಂಪು ಅವರ ಸಾಹಿತ್ಯ ಕನ್ನಡಾಭಿಮಾನ, ದೇಶಾಭಿಮಾನವನ್ನು ಬೆಳೆಸುತ್ತದೆ. ಅವರು ರಚಿಸಿರುವ ಸಾವಿರಾರು ಕವಿತೆಗಳು ಮನಮುಟ್ಟುವಂತಿದ್ದು, ಅವರು ರಚಿಸಿರುವ ರೈತ ಗೀತೆಯು ರೈತನ ಬದುಕನ್ನು ಕಟ್ಟಿಕೊಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ಜಯಣ್ಣ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ.ಸತ್ಯಭಾಮ, ಎ.ಐ.ಟಿ ಕಾಲೇಜಿನ ನಿರ್ದೇಶಕ ಡಾ.ಸಿ.ಕೆ.ಸುಬ್ರಾಯ, ಪ್ರಿನ್ಸಿಪಾಲ್ ಡಾ.ಸಿ.ಟಿ.ಜಯದೇವ, ಹಿರೇಮಗಳೂರು ಕಣ್ಣನ್ ಮತ್ತಿತರರು ಉಪಸ್ಥಿರಿದ್ದರು.
ಸಾಹಿತಿಗಳಾದ ರವೀಶ್ ಕ್ಯಾತನಬೀಡು ಅವರು ಕುವೆಂಪು ಸಾಹಿತ್ಯದಲ್ಲಿ ವೈಚಾರಿಕ ದೃಷ್ಠಿ ಬಗ್ಗೆ, ಬೆಳವಾಡಿ ಮಂಜುನಾಥ್ ಕುವೆಂಪು ರವರ ಕಾವ್ಯಗಳು ಕುರಿತು, ಚಿಂತಕ ಸ.ಗಿರಿಜಾಶಂಕರ್ ಕುವೆಂಪು ಸಾಹಿತ್ಯದಲ್ಲಿ ಪ್ರಕೃತಿ ಬಗ್ಗೆ, ಡಾ.ಹೆಚ್.ಎಂ.ಮಹೇಶ್ ಕುವೆಂಪು ರವರ ಮಹಾಕಾವ್ಯ ಕುರಿತು ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೆಶ್ ಸ್ವಾಗತಿಸಿದರು, ಸುಮಪ್ರಸಾದ್ ನಿರೂಪಿಸಿದರು.







