ವಿಶ್ವಕಪ್ ಫುಟ್ಬಾಲ್ ಕನಸಿಗೆ ಏಶ್ಯಕಪ್ ಟೂರ್ನಿ ಮೆಟ್ಟಿಲು: ಪಟೇಲ್

ಹೊಸದಿಲ್ಲಿ, ಡಿ.29: 2026ರ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಅರ್ಹತೆ ಪಡೆದುಕೊಳ್ಳುವ ಉತ್ಸಾಹದಲ್ಲಿರುವ ಭಾರತೀಯ ಫುಟ್ಬಾಲ್ ತಂಡಕ್ಕೆ ಮುಂಬರುವ ಏಶ್ಯಕಪ್ ಫುಟ್ಬಾಲ್ ಟೂರ್ನಿ ಈ ಗುರಿಯತ್ತ ಸಾಗಲು ಒದಗಿಬಂದಿರುವ ಒಂದು ಸುವರ್ಣಾವಕಾಶವಾಗಿದೆ ಎಂದು ಎಐಎಫ್‌ಎ ಅಧ್ಯಕ್ಷ ಪ್ರಫುಲ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಫಿಫಾ ರ್ಯಾಂಕಿಂಗ್ ಪಟ್ಟಿಯಲ್ಲಿ 97ನೇ ಸ್ಥಾನದಲ್ಲಿರುವ ಭಾರತ ಇದುವರೆಗೂ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅರ್ಹತೆ ಗಳಿಸಿಲ್ಲ. ಸುಮಾರು 1.3 ಬಿಲಿಯನ್ ಜನಸಂಖ್ಯೆಯಲ್ಲಿರುವ ದೇಶದಲ್ಲಿ ಕ್ರಿಕೆಟ್ ಆಟದ ಜನಪ್ರಿಯತೆಯ ಎದುರು ಉಳಿದೆಲ್ಲಾ ಕ್ರೀಡೆಗಳೂ ಸೊರಗಿದ್ದು ಫುಟ್ಬಾಲ್ ಕೂಡಾ ಇದಕ್ಕೆ ಹೊರತಾಗಿಲ್ಲ. ಆದರೆ 2026ಕ್ಕೂ ಮುನ್ನ ದೇಶದ ಕನಸನ್ನು ನನಸಾಗಿಸಬೇಕಿದೆ. ಫಿಫಾ ವಿಶ್ವಕಪ್ ಫೈನಲ್ಸ್‌ನಲ್ಲಿ ಏಶ್ಯ ಖಂಡದಿಂದ 8 ತಂಡಗಳಿಗೆ ಅವಕಾಶವಿದ್ದು, ಈ ಬಾರಿ ಕನಸು ಕಾಣುವುದಕ್ಕಷ್ಟೇ ನಾವು ತೃಪ್ತರಾಗದೆ ಒಂದು ಹೆಜ್ಜೆ ಮುಂದಿಡಬೇಕಾಗಿದೆ ಎಂದು ಪಟೇಲ್ ಹೇಳಿದ್ದಾರೆ. ಖತರ್‌ನಲ್ಲಿ ನಡೆಯಲಿರುವ ಏಶ್ಯನ್ ಕಪ್ ಫುಟ್ಬಾಲ್ ಟೂರ್ನಿಗೆ ಭಾರತ ಹಿಂಬಾಗಿಲಿನ ಮೂಲಕ ಪ್ರವೇಶಿಸಿದೆ. ಏಶ್ಯ ಖಂಡದ ಕೆಳಗಿನ ಕ್ರಮಾಂಕದ ತಂಡಗಳ ಮಧ್ಯೆ ನಡೆಯುವ ಎಎಫ್‌ಸಿ ಚಾಲೆಂಜ್ ಕಪ್ ಟೂರ್ನಿಯಲ್ಲಿ ಗೆಲ್ಲುವ ಮೂಲಕ ಭಾರತ ಏಶ್ಯಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ.





