ಕಿರ್ಮಾನಿ ದಾಖಲೆ ಸರಿಗಟ್ಟಿದ ಪಂತ್

ಮೆಲ್ಬೋರ್ನ್,ಡಿ.29: ಭಾರತದ ವಿಕೆಟ್ ಕೀಪರ್ ರಿಷಬ್ ಪಂತ್ ಇದೀಗ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳುವ ಸನಿಹದಲ್ಲಿದ್ದಾರೆ. ಆತಿಥೇಯ ಆಸ್ಟ್ರೇಲಿಯಾದೆದುರು ಎಂಸಿಜಿಯಲ್ಲಿ ನಡೆಯುತ್ತಿರುವ ಮೂರನೇ ಕ್ರಿಕೆಟ್ ಪಂದ್ಯದ ನಾಲ್ಕನೇ ದಿನ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್‌ರ ಕ್ಯಾಚ್ ಪಡೆಯುವ ಮೂಲಕ ಭಾರತದ ವಿಕೆಟ್‌ಕೀಪರ್‌ಗಳಾದ ನರೇಂದ್ರ ತಮ್ಹಾನೆ ಹಾಗೂ ಸಯ್ಯದ್ ಕಿರ್ಮಾನಿ ಹೆಸರಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.
ವಿದೇಶದ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ಆಟಗಾರರನ್ನು ‘ಬಲಿ’ ಪಡೆದ (ಕ್ಯಾಚ್ ಅಥವಾ ಸ್ಟಂಪಿಂಗ್ ಮೂಲಕ ಔಟ್ ಮಾಡಿದ) ಭಾರತೀಯ ವಿಕೆಟ್ ಕೀಪರ್‌ಗಳ ಸಾಲಿನಲ್ಲಿ ಪಂತ್ ಸ್ಥಾನ ಪಡೆದಿದ್ದಾರೆ. ಸಯ್ಯದ್ ಕಿರ್ಮಾನಿ ಮತ್ತು ತಮ್ಹಾನೆ ತಲಾ 19 ಆಟಗಾರರನ್ನು ಔಟ್ ಮಾಡಿರುವ ದಾಖಲೆಯನ್ನು ಶನಿವಾರ ಪಂತ್ ಸರಿಗಟ್ಟಿದ್ದಾರೆ. ಶನಿವಾರದ ಆಟದ ಅಂತ್ಯಕ್ಕೆ ಆಸ್ಟ್ರೇಲಿಯಾ 8 ವಿಕೆಟ್ ಕಳೆದುಕೊಂಡಿದ್ದು, ರವಿವಾರದ ಆಟದಲ್ಲಿ ಹೊಸ ದಾಖಲೆ ಬರೆಯುವ ಅವಕಾಶ ಪಂತ್‌ಗಿದೆ. ಅಲ್ಲದೆ ಸರಣಿಯಲ್ಲಿ ಇನ್ನೂ ಒಂದು ಟೆಸ್ಟ್ ಪಂದ್ಯ ಬಾಕಿ ಇರುವ ಕಾರಣ ಪಂತ್ ನೂತನ ದಾಖಲೆ ಬರೆಯುವುದು ಬಹುತೇಕ ಖಚಿತವಾಗಿದೆ.





