ನಗರದ ವಿವಿಧೆಡೆ ಕುವೆಂಪು ರಚನೆಯ ಸಾಲುಗಳ ಪ್ರದರ್ಶನಕ್ಕೆ ಚಿಂತನೆ: ಮೈಸೂರು ಮನಪಾ ಮೇಯರ್

ಮೈಸೂರು,ಡಿ.29: ರಾಷ್ಟ್ರಕವಿ ಕುವೆಂಪು ಅವರ ರಚನೆಯ ಕೃತಿಗಳ ಹಾಗೂ ಅವರ ರಚನೆಯ ಮುಖ್ಯವಾದ ಸಾಲುಗಳನ್ನ ಮೈಸೂರು ನಗರದ ವಿವಿಧೆಡೆ ಪ್ರದರ್ಶನ ಮಾಡುವ ಚಿಂತನೆ ಇದೆ ಎಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ರಾಷ್ಟ್ರ ಕವಿ ಕುವೆಂಪು ಅವರ ರಚನೆಯ ಕೃತಿಗಳ ಹಾಗೂ ಅವರ ರಚನೆಯ ಮುಖ್ಯವಾದ ಸಾಲುಗಳನ್ನ ಮೈಸೂರು ನಗರದ ವಿವಿಧೆಡೆ ಪ್ರದರ್ಶನ ಮಾಡುವ ಚಿಂತನೆ ಇದೆ. ಈ ಸಂಬಂಧ ಅಧಿಕಾರಿಗಳು ಪಾಲಿಕೆ ಸದಸ್ಯರ ಜೊತೆ ಮಾತುಕತೆ ನಡೆಸಲಾಗಿದೆ. ಆದಷ್ಟು ಬೇಗ ಈ ಕೆಲಸವನ್ನು ಮಾಡುವುದಾಗಿ ತಿಳಿಸಿದರು.
ಕನ್ನಡ ಸಾಹಿತ್ಯದ ಅನರ್ಘ್ಯ ರತ್ನರಾದ ಕುವೆಂಪು ಅವರ ಪ್ರಾರಂಭಿಕ ಅಕ್ಷರಾಭ್ಯಾಸವು ಮನೆಯಲ್ಲೇ ನಡೆದಿರುವುದು ವಿಶೇಷವಾಗಿದೆ. ಕುವೆಂಪು ಸಾಹಿತ್ಯವು ಸರಳ ಹಾಗೂ ಅರ್ಥ ಮಾಧುರ್ಯತೆಯಿಂದ ಕೂಡಿದೆ. ಇವರು ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ತಮ್ಮ ಬಾಲ್ಯಾವಸ್ಥೆಯಲ್ಲಿ ಆಂಗ್ಲ ಭಾಷೆಯಲ್ಲಿಯೂ ಕವನಗಳನ್ನು ರಚಿಸುತ್ತಿದ್ದ ಮಹಾಕವಿ. ಕುವೆಂಪುರವರ ಕನ್ನಡಾಭಿಮಾನವನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಇವರ ಸಾಹಿತ್ಯದ ಒಳಹೊಕ್ಕಾಗ ಎಲ್ಲಾ ಪ್ರಕಾರಗಳಲ್ಲಿಯೂ ಮಹಿಳೆಯರಿಗೆ ಮೊದಲನೆಯ ಪ್ರಾಶಸ್ತ್ಯವನ್ನು ಕೊಟ್ಟಿರುವುದು ಗಮನಾರ್ಹವಾಗಿದೆ. ಮಹಿಳೆಯರಿಗೆ ಮೊದಲ ಗೌರವ ನೀಡುವುದು ಕುವೆಂಪುರವರ ಹಿರಿಮೆ ಎಂದು ಹೇಳಿದರು.
ಕುವೆಂಪು ಅವರು ಮೈಸೂರು ವಿವಿಗೆ ಸಾಕಷ್ಟು ದುಡಿದವರು. ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅತಿ ಹೆಚ್ಚು ಕೊಡುಗೆ ನೀಡಿದ ಮಹಾಕವಿಯ ಸಂದೇಶ ಮುಂದಿನ ಯುವ ಜನತೆಗೆ ಗೊತ್ತಾಗಬೇಕು. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಕುವೆಂಪು ಅವರ ರಚನೆಯುಳ್ಳಂತಹ ಸಾಲುಗಳನ್ನು ಪ್ರದರ್ಶಿಸುವ ಕೆಲಸ ಮಾಡಲಾಗುವುದು ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು.
ಇದಕ್ಕೂ ಮೊದಲು ಗನ್ ಹೌಸ್ ಬಳಿ ಇರುವ ಕುವೆಂಪು ಅವರ ಪ್ರತಿಮೆಗೆ ಮೇಯರ್ ಪುಷ್ಪಲತಾ ಜಗನ್ನಾಥ್ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಕೆ.ಚನ್ನಪ್ಪ, ಸಾಹಿತಿ ಪ್ರೊ.ಕೆ.ಭೈರವಮೂರ್ತಿ, ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮಡ್ಡಿಕೆರೆ ಗೋಪಾಲ್, ಬಿ.ಎ.ಶಿವಶಂಕರ್, ಕೆ.ರಘುರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







