ಬಂಟ್ವಾಳ: ಅಜಿತ್ ಹನುಮಕ್ಕನವರ್ ವಿರುದ್ಧ ಎಂ ಎಸ್ ಎಫ್ ದ.ಕ. ಜಿಲ್ಲಾ ಸಮಿತಿ ದೂರು

ವಿಟ್ಲ, ಡಿ. 30: ಪ್ರವಾದಿ ಮುಹಮ್ಮದ್ (ಸ ಅ) ನಿಂದಿಸಿದ ಅಜಿತ್ ಹನುಮಕ್ಕನವರ್ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಎಂ ಎಸ್ ಎಫ್ ದ.ಕ. ಜಿಲ್ಲಾ ಸಮಿತಿ ತಿಳಿಸಿದೆ.
ನಂತರ ಮಾತನಾಡಿದ ಎಂ ಎಸ್ ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಬಾತಿಷಾ ಕೊಡ್ಲಿಪೇಟೆ ಅಜಿತ್ ಹನುಮಕ್ಕನವರ್ ರಿಂದ ಇಂತಹ ಪ್ರಕರಣ ಗಳು ಮೊದಲ ಬಾರಿ ಸಂಭವಿಸಿದ್ದಲ್ಲ ಬದಲಾಗಿ ಹಲವಾರು ಬಾರಿ ನಡೆದಿದ್ದು, ಇದೀಗ ಪ್ರೊ. ಭಗವಾನ್ ರವರ ಸಾಹಿತ್ಯದ ಚರ್ಚೆಯಲ್ಲಿ ಅನಾವಶ್ಯಕವಾಗಿ ಪ್ರವಾದಿಯವರ ಹೆಸರನ್ನು ಎಳೆದುತಂದು ಅವಮಾನಿಸಿ, ಧಾರ್ಮಿಕ ಭಾವನೆಗಳಿಗೆ ದಕ್ಕೆಯನ್ನುಂಟು ಮಾಡಿದ್ದಾರೆ ಮತ್ತು ಕೋಮು ವಿಷ ಬೀಜ ಬಿತ್ತುವ ಕೆಲಸ ಮಾಡಿದ್ದಾರೆ. ಆದುದ್ದರಿಂದ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಜಿಲ್ಲಾಧ್ಯಕ್ಷರಾದ ಇಸ್ರಾರ್ ಗೂಡಿನಬಳಿ, ಪತ್ರಕರ್ತರು ಈ ದೇಶದ ಕೋಮು ಸೌಹಾರ್ದತೆಗೆ ಪ್ರಯತ್ನಿಸಬೇಕೇ ಹೊರತು ಕೋಮುಭಾವನೆ ಕೆರಳಿಸುವ ಕೆಲಸವನ್ನು ಮಾಡಬಾರದು. ಕೇವಲ ಒಂದು ಸಾಹಿತ್ಯದ ವಿಚಾರದಲ್ಲಿ ಮುಸ್ಲಿಮರ ಭಾವನೆಗಳಿಗೆ ದಕ್ಕೆಯನ್ನುಂಟು ಮಾಡುವ ರೀತಿಯಲ್ಲಿ ನಡೆಸಿದ ಪರಾಮರ್ಶೆ ಯಾವೊಬ್ಬ ಮುಸಲ್ಮಾನನಿಗೂ ಅಂಗೀಕರಿಸಲು ಸಾಧ್ಯವಿಲ್ಲ. ಆದುದರಿಂದ ಅಜಿತ್ ಹನುಮಕ್ಕನವರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದರು.
ಮುಸ್ಲಿಂ ಲೀಗ್ ಜಿಲ್ಲಾ ಪ್ರ. ಕಾರ್ಯದರ್ಶಿ ಟಿ. ಯು. ಇಸ್ಮಾಯಿಲ್, ಜಿ. ಇಬ್ರಾಹಿಂ ಕುಕ್ಕಾಜೆ. ಅಬ್ದುಲ್ ಕರೀಮ್ ಬೊಳ್ಳಾಯಿ, ಶಾಝಿಲ್ ಗೂಡಿನಬಳಿ ಮತ್ತಿತರರು ಭಾಗವಹಿಸಿದ್ದರು.